ಬೆಂಗಳೂರು, ಅ 31 (DaijiworldNews/MS): "ಕಾಂಗ್ರೆಸ್ ಬದುಕಿನ ಆಧಾರದ ಮೇಲೆ ರಾಜಕೀಯ ಮಾಡಿದರೆ, ಬಿಜೆಪಿ ಭಾವನೆಗಳ ಮೇಲೆ ಮಾಡುತ್ತದೆ. ಇಂದಿರಾ ಗಾಂಧಿ ಅವರು ಜನರ ಬದುಕಿಗೆ ನೆರವಾಗುವ ಯೋಜನೆಗಳನ್ನು ನೀಡಿದ ಮಹಾನ್ ಶಕ್ತಿ"ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಮಂಗಳವಾರ ನಡೆದ ಇಂದಿರಾ ಗಾಂಧಿ ಅವರ 39 ನೇ ವರ್ಷದ ಪುಣ್ಯಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
“ಬಿಜೆಪಿಯವರು ಸಮಾಜ ಒಡೆಯುವ ಯೋಜನೆಗಳನ್ನು ಕೊಟ್ಟಿದ್ದಾರೆ. ತಮ್ಮ ಸ್ವಂತ ಹಣದಿಂದ ದೇಶಕ್ಕೆ 60/40 ಅಳತೆಯ ಒಂದೇ ಒಂದು ನಿವೇಶನವನ್ನೂ ನೀಡಿಲ್ಲ. ನೆಹರು ಅವರು ತಮ್ಮ ಮುಕ್ಕಾಲು ಪಾಲು ಆಸ್ತಿಯನ್ನೇ ಈ ದೇಶಕ್ಕೆ ಬರೆದರು. ಈಗ ರಾಹುಲ್ ಗಾಂಧಿ ಅವರ ಬಳಿ ಏನೂ ಇಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಆಸ್ತಿಯ ಜೊತೆಗೆ ಪ್ರಾಣತ್ಯಾಗವನ್ನು ಮಾಡಿದ್ದಾರೆ. ಬಿಜೆಪಿಯವರು ಒಬ್ಬರಾದರೂ ಇಂತಹ ಕೆಲಸ ಮಾಡಿದ್ದಾರೆಯೇ?
ಕಬ್ಬಿಣದಿಂದ ಸೂಜಿ ಮತ್ತು ಕತ್ತರಿ ಎರಡನ್ನೂ ತಯಾರಿಸಬಹುದು. ಸೂಜಿಯಿಂದ ಕೂಡಿಸಿ ಹೊಲಿಯಬಹುದು, ಕತ್ತರಿಯಿಂದ ಕತ್ತರಿಸಬಹುದು. ನಾವು ಸಮಾಜದ ಎಲ್ಲಾ ವರ್ಗದವರನ್ನು ಕೂಡಿಸಿ ಹೊಲಿಯುತ್ತೇವೆ, ಬಿಜೆಪಿಯವರು ಕತ್ತರಿಸುತ್ತಾರೆ. ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು, ನಾವು ಬೆಂಗಳೂರಿನಲ್ಲಿ ʼಇಂಡಿಯಾʼಎಂದು ಹೆಸರಿಟ್ಟ ತಕ್ಷಣ ಇಂಡಿಯಾ ಎನ್ನುವ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವೀಸ್ ಸೇರಿದಂತೆ ನೋಟಿನಲ್ಲಿಯೂ ಹೆಸರು ಬದಲಾಯಿಸಲು ಬಿಜೆಪಿ ಹೊರಟಿರುವುದು ಹಾಸ್ಯಾಸ್ಪದ.
ಮೇಕ್ ಇನ್ ಇಂಡಿಯಾ ಎಂದು ಹೆಸರಿಟ್ಟಿದ್ದೇ ಅವರು, ಅದರ ಗುರುತು ಸಿಂಹವನ್ನ ಸಿಎಂ ಮನೆಯ ಎದುರೇ ನಿಲ್ಲಿಸಲಾಗಿದೆ. ಅವರು ಮಾಡಿದ ಯೋಜನೆಯ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯಾ ಎನ್ನುವ ಹೆಸರು ಭಾವನಾತ್ಮಕವಾಗಿ ನಮ್ಮೊಳಗೆ ಹಾಸುಹೊಕ್ಕಾಗಿದೆ. ಈ ರೀತಿ ಭಾವನೆ ಕೆರಳಿಸುವ ಕೆಲಸಕ್ಕೆ ಬಿಜೆಪಿಯವರು ಕೈ ಹಾಕಿದ್ದಾರೆ, ನಾವು ಜನರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಕೈ ಹಾಕೋಣ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಉಚಿತ ಬಸ್ ಹೀಗೆ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮದ ಆಧಾರದ ಮೇಲೆ ತಂದಿದ್ದೇವೆಯೇ? ಇಲ್ಲ. ನಮಗಿಂತ ಹೆಚ್ಚು ಬಿಜೆಪಿ, ದಳದವರೇ ಈ ಯೋಜನೆಗಳ ಫಲಾನುಭವಿಗಳು. ಮಂಗಳೂರು ಸೇರಿದಂತೆ ಅನೇಕ ಕಡೆ ಬಿಜೆಪಿಯವರೇ ಗ್ಯಾರಂಟಿ ಯೋಜನೆಗಳಿಗೆ ಮುಗಿಬಿದ್ದು, ಮೊದಲು ನೋಂದಣಿ ಮಾಡಿಕೊಳ್ಳುತ್ತಿದ್ದರು ಎಂದು ವಿನಯ್ ಕುಮಾರ್ ಸೊರಕೆ, ಮಿಥುನ್ ರೈ, ಇನಾಯತ್ ಅವರು ಹೇಳುತ್ತಿದ್ದರು. ನಮಗೆ ಮತಗಳು ಮಾತ್ರ ಇಲ್ಲ, ಆದರೆ ಯೋಜನೆಗಳು ಮಾತ್ರ ಬೇಕು. ಕರಾವಳಿಯ ಜನ ಮುಂದೊಂದು ದಿನ ಬದಲಾಗಬಹುದು ಎಂದು ಕಾದು ನೋಡೋಣ, ವಿಶ್ವಾಸವಿಟ್ಟು ನಡೆಯೋಣ ಎಂದು ಹೇಳಿದರು.