ಹೊಸಪೇಟೆ, ನ.02 (DaijiworldNews/AK):ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ. ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಎಲ್ಲ ವದಂತಿಗೆ ತೆರೆ ಎಳೆದಿದ್ದಾರೆ.
ಅವರು ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಗಣಿಗಾರಿಕೆಗೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ ವರ್ಗದ ಗಣಿಗಾರಿಕೆ ಕಾನೂನುಬದ್ಧವಾಗಿ ಪರವನಾಗಿ ತೆಗೆದುಕೊಂಡಲ್ಲಿ, ಎಲ್ಲ ಸಂಬಂಧಪಟ್ಟ ಇಲಾಖೆಗಳಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದರು.
ಅರಣ್ಯ ಇಲಾಖೆಯೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಎ,ಬಿ, ಸಿ ಅಥವಾ ಯಾವುದೇ ವರ್ಗದ ಗಣಿಗಾರಿಕೆಗೆ ತೊಂದರೆ ನೀಡದಂತೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಪರ್ಯಾಯ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ನಾವು ಹಿಂದೆ ಅಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ನಡೆಸಿದ್ದೆವು. ಅಕ್ರಮ ಗಣಿಗಾರಿಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಸರ್ಕಾರ ಪತನಗೊಳಿಸುವ ಬಿಜೆಪಿಯವರ ವ್ಯರ್ಥ ಪ್ರಯತ್ನ:
ಶಾಸಕ ರಮೇಶ್ ಜಾರಕಿಹೊಳಿಯವರು ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಗೆಲ್ಲಿಸಿ ಬಹುಮತ ನೀಡಿದ್ದಾರೆ.
ಐದು ವರ್ಷ ಕಾಂಗ್ರೆಸ್ ಸರ್ಕಾರವೇ ಆಡಳಿತ ಇರುತ್ತದೆ. ನಾನೇ ಐದುವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ. ಒಮ್ಮೆ ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಯಶಸ್ವಿಯಾಗಿದ್ದರಿಂದ, ಈಗ ಮತ್ತೆ ಆ ಪ್ರಯತ್ನಕ್ಕೆ ಕೈಹಾಕಬಹುದು ಎಂದುಕೊಂಡಿದ್ದಾರೆ. ಆದರೆ ಅವರ ಪ್ರಯತ್ನ ವ್ಯರ್ಥವಾಗಲಿದೆ ಎಂದರು.
ಹೈಕಮಾಂಡ್ ನಿರ್ಧಾರ :
ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿಗಳು ಇರಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಪ್ರಾದೇಶಿಕ ಪಕ್ಷ ಅಲ್ಲ. ಇಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.