ಬೆಂಗಳೂರು: ನ 04 (DaijiworldNews/MR): ಬರಪೀಡಿತ ಜಿಲ್ಲೆಗಳಲ್ಲಿ ಸಂಚರಿಸಿ, ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಎರಡು ವಾರಗಳಲ್ಲಿ, ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ, ಮುಂತಾದವುಗಳ ಸ್ಥಿತಿಗತಿಗಳ ಕುರಿತು ಪರಿಶೀಲಿಸಬೇಕು.ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದ್ದಾರೆ.
ಸ್ಥಳೀಯ ಶಾಸಕರೊಂದಿಗೆ ಗೋಶಾಲೆ, ಮೇವು ಬ್ಯಾಂಕ್, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಮುಂತಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಿ, ಅಗತ್ಯವಿರುವ ಕಡೆ ಭೇಟಿ ನೀಡಿ ಪರಿಶೀಲಿಸಿ.
ಬರ ನಿರ್ವಹಣೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವೈಫಲ್ಯಗಳಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ.
ಬರ ಪರಿಸ್ಥಿತಿಯ ಸಂಪೂರ್ಣ ವಸ್ತುಸ್ಥಿತಿ ಹಾಗೂ ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಬರ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ, ಪ್ರತಿ ತಾಲ್ಲೂಕುಗಳಲ್ಲಿ ಮಾಧ್ಯಮಗಳಿಗೆ ವಿವರಿಸಿ, ನವೆಂಬರ್ 15ರೊಳಗೆ ವರದಿ ನೀಡಲು ಸಿದ್ದರಾಮಯ್ಯ ಸಚಿವರಿಗೆ ತಿಳಿಸಿದ್ದಾರೆ.
ರಾಜ್ಯದ 236 ತಾಲೂಕುಗಳ ಪೈಕಿ ಇದುವರೆಗೆ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.