ಲಕ್ನೋ,ಏ15(AZM):ಸುಮಾರು ನಾಲ್ಕು ಕಿ.ಮೀ ದೂರ ಆ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಬೆಂಕಿ ತಗುಲಿದ್ದ ಬೈಕ್ ನಲ್ಲೇ ಸಂಚರಿಸಿದ್ದಾರೆ. ಅದೃಷ್ಟಾವಶತ್ ಪೊಲೀಸರ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇಂತಹ ಒಂದು ಘರ್ಅನೆ ನಡೆದಿದ್ದು ಇಟಾವಾದ ಎಕ್ಸ್ ಪ್ರೆಸ್ ಹೈವೇಯಲ್ಲಿ.

ವಾಸ್ತವವಾಗಿ ಈ ದಂಪತಿಗೆ ತಾವಿದ್ದ ಬೈಕ್ ನ ಹಿಂಭಾಗದ ಟಯರ್ ಬಳಿ ಬೆಂಕಿ ತಗುಲಿರುವ ವಿಚಾರವೇ ತಿಳಿದಿರಲಿಲ್ಲ. ಆದರೆ ಈ ವಿಚಾರ ಆ ದಾರಿಯಲ್ಲಿ ಡ್ಯೂಟಿಯಲ್ಲಿದ್ದ ಉತ್ತರ ಪ್ರದೇಶ ಪೊಲೀಸ್ ಇಲಾಕೆಯ 100 ನಂಬರ್ ತಂಡದ ಗಮನಕ್ಕೆ ಬಂದಿದೆ. ಈ ದೃಶ್ಯ ಕಂಡ ಪೊಲೀಸರೇ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಆ ಕೂಡಲೇ ಕಿರುಚಿ ಆ ದಂಪತಿಯನ್ನು ಎಚ್ಚರಿಸಲು ಯತ್ನಿಸಿದೆ ಆದರೆ ಬೈಕ್ ವೇಗವಾಗಿದ್ದ ಕಾರಣದಿಂದಲೋ ಏನೋ ಗಂಡ ಹೆಂಡತಿ ಆ ಕಡೆ ಹೆಚ್ಚು ಗಮನ ನೀಡಿಲ್ಲ.
ಆದರೆ ಮುಂದೆ ಎದುರಾಗಲಿರುವ ಅಪಾಯವನ್ನರಿತ ಪೊಲೀಸರು ಆಕೂಡಲೇ ಅಲರ್ಟ್ ಆಗಿದ್ದಾರೆ. ವೇಗವಾಗಿ ಹೋಗುತ್ತಿದ್ದ ಬೈಕನ್ನು ಬೆನ್ನಟ್ಟಿದ್ದ ಅವರು ಸುಮಾರು 4 ಕಿ. ಮೀಟರ್ ಕ್ರಮಿಸಿದ ಬಳಿಕ ತಡೆಯಲು ಯಶಸ್ವಿಯಗಿದ್ದಾರೆ. ಕೂಡಲೇ ಬೈಕ್ ನಲ್ಲಿದ್ದವರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೊಯ್ದಿದ್ದಾರೆ. ಬಳಿಕ ಬೈಕ್ ಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನೆಯಲ್ಲಿ ದಂಪತಿ ಹಾಗೂ ಮಗು ಕೂದಲೆಳೆ ಅಂತರದಲ್ಲಿ ಬದುಕಿದ್ದಾರೆ.