ದೆಹಲಿ: ನ 05 (DaijiworldNews/MR): ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವೈದ್ಯರು ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 7 ವರ್ಷದ ಮಗುವಿನ ಎಡ ಭಾಗದ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ.
ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ಪ್ರಕಾರ, ಮಗುವಿನ ಶ್ವಾಸಕೋಶದಲ್ಲಿ 4 ಸೆಂ.ಮೀ ಉದ್ದದ ಸೂಜಿ ಅಂಟಿಕೊಂಡಿತ್ತು, ಇದನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಗಿದೆ.
ಬಾಲಕ ಪದೇ ಪದೇ ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ, ನಿರಂತರವಾಗಿ ಕೆಮ್ಮು ಬರುತ್ತಿತ್ತು. ವೈದ್ಯರು ಮಗುವಿನ ಪರೀಕ್ಷೆಯನ್ನು ನಡೆಸಿದಾಗ ಮಗುವಿನ ಎಡ ಭಾಗದ ಶ್ವಾಸಕೋಶದಲ್ಲಿ ಹೊಲಿಗೆ ಯಂತ್ರದ ಸೂಜಿ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಡಾ.ವಿಶೇಶ್ ಜೈನ್ ಮತ್ತು ಡಾ.ದೇವೇಂದ್ರ ಕುಮಾರ್ ಯಾದವ್ ಅವರು ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರ ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.ಚಾಂದಿನಿ ಚೌಕ್ನಿಂದ 4 ಎಂಎಂ ಅಗಲ ಮತ್ತು 1.5 ಎಂಎಂ ದಪ್ಪದ ಆಯಸ್ಕಾಂತವನ್ನು ಬಾಯಿಯ ಮೂಲಕ ಶ್ವಾಸಕೋಶಕ್ಕೆ ತಲುಪಿಸಲಾಯಿತು.
ಸೂಜಿಯು ಅಯಸ್ಕಾಂತಕ್ಕೆ ಅಂಟಿಕೊಂಡಿತು ಮತ್ತು ಶ್ವಾಸಕೋಶದಿಂದ ಹೊರತೆಗೆಯಲಾಯಿತು.
ಸೂಜಿ ಹೊರಬಂದ ತಕ್ಷಣ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಬಾಲಕ ಸೂಜಿ ನುಂಗಿದ್ದು ಅವನ ತಾಯಿಗೂ ಗೊತ್ತಿರಲಿಲ್ಲ. ಗುರುವಾರ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಶುಕ್ರವಾರ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಬಾಲಕನ ಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.