ಬೆಂಗಳೂರು, ನ. 5 (DaijiworldNews/SK): ಬೆಂಗಳೂರು ಕಂಬಳಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನ.24ರಿಂದ 26 ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಕೋಟಿ ರೂ ಘೋಷಣೆ ಮಾಡಿದ್ದಾರೆ ಎಂದು ಕಂಬಳ ಅಧ್ಯಕ್ಷರಾದ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಆಯೋಜನೆ ಮಾಡಲಾಗಿದ್ದು, ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಂಬಳ ಸಮಿತಿ ನೇಮಕ ಮಾಡಿದೆ. ಕರೆ ಮುಹೂರ್ತದ ಬಳಿಕ ಅನೇಕ ಸಚಿವರು ಕಂಬಳ ನಡೆಯುವ ಅರಮನೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಈ ಹಿಂದೆ ಘೋಷಣೆಯನ್ನು ಮಾಡಿದ್ದರು. ಇನ್ನೂ ಕಂಬಳ'ಕ್ಕೆ ಖ್ಯಾತ ಬಾಲಿವುಡ್ ನಟಿಯರು, ಸೆಲೆಬ್ರಿಟಿಗಳು ಆಗಮಿಸಲಿದ್ದು, ಕನಿಷ್ಠ 5 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಇದೀಗ ಕಂಬಳಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಕಂಬಳ ಸಮಿತಿಯವರ ಉತ್ಸಾಹವನ್ನು ಕಂಡ ಸಿಎಂ ಅವರು ಕಂಬಳಕ್ಕೆ ಸರಕಾರದಿಂದ ಒಂದು ಕೋಟಿ ರೂ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದು ಕಂಬಳದ ಮೆರುಗನ್ನು ಮತಷ್ಟು ಹೆಚ್ಚಿಸಿದೆ.