ಮಂಡ್ಯ,ಏ15(AZM):ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದು ಯಶ್ ಅವರು ಹೇಳಿದ್ದಾಗಿ ಆರೋಪಿಸಿ ಸಿಎಂ ಕುಮಾರಸ್ವಾಮಿ ಇಂದು ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೀಗ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಪಕ್ಷವನ್ನು ನಾನೆಂದೂ ಕಳ್ಳರ ಪಕ್ಷವೆಂದು ಹೇಳಲಿಲ್ಲ.ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ತೋರಿಸಿಬಿಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಪಕ್ಷದಲ್ಲಿಯೂ ನನಗೆ ತುಂಬ ಜನರು ಸ್ನೇಹಿತರಿದ್ದಾರೆ. ಕಳೆದ ಬಾರಿ ಅವರ ಪರವಾಗಿಯೂ ಹೋಗಿ ಪ್ರಚಾರ ನಡೆಸಿದ್ದೆ. ಅದು ಕಳ್ಳರ ಪಕ್ಷವೆಂದಾದರೆ ನಾನ್ಯಾಕೆ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದರು. ಅವರು ರಾಜ್ಯದ ಸಿಎಂ. ತುಂಬ ಬಿಜಿಯಾಗಿರುತ್ತಾರೆ. ಈ ವಿಚಾರದಲ್ಲಿ ಯಾರೋ ಚಾಡಿ ಹೇಳಿರಬೇಕು. ಮಿಸ್ ಗೈಡ್ ಮಾಡಿರಬೇಕು. ನಾನ್ಯಾವತ್ತೂ ಹಾಗೆ ಹೇಳಲಿಲ್ಲ. ಸುಮ್ಮನೆ ಆಡದ ಮಾತಿಗೆಲ್ಲ ನಾನು ಆರೋಪ ಹೊತ್ತುಕೊಳ್ಳುವುದಿಲ್ಲ. ಅವರ ಪಕ್ಷದಲ್ಲೇ ಹಲವು ಜನರು ಏನೇನೋ ಕೆಟ್ಟದಾಗಿ ಮಾತುಗಳನ್ನಾಡುತ್ತಿದ್ದಾರೆ. ಮಾಯಾಂಗನೆ ಎನ್ನುತ್ತಿದ್ದಾರೆ. ನಮಗೂ ಸಿನಿಮಾದವರು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತೀರ ಪರ್ಸನಲ್ ಆಗಿ ವಾಗ್ದಾಳಿ ನಡೆಸಿದಾಗ ತಿರುಗಿ ಮಾತಾಡಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ಸಿನಿಮಾದವರ ಮಾತು ನಂಬಬೇಡಿ ಎಂದು ಪದೇಪದೆ ಹೇಳಿದ್ದರು. ಈಗ ತಾವೂ ನಿರ್ಮಾಪಕ ಎನ್ನುವ ಮೂಲಕ ಅವರೂ ಸಿನಿಮಾದವರು ಎಂಬುದನ್ನು ಒಪ್ಪಿಕೊಂಡಿದ್ದಾರಲ್ಲ. ಹಾಗಾಗಿ ಜನ ಯಾರ ಮಾತನ್ನೂ ನಂಬಬಾರದು ಎಂದಾಯಿತಲ್ಲ ಎಂದು ಟಾಂಗ್ ನೀಡಿದರು.