ತಿರುವನಂತಪುರ, ನ 06 (DaijiworldNews/MS): ಧಾರ್ಮಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿರುವ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ಮತ್ತು ದೇವಸ್ವಂ ಮಂಡಳಿಗಳು ಕ್ರಮ ಕೈಗೊಳ್ಳಲಿವೆ ಎಂದು ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಹೇಳಿದ್ದಾರೆ.
"ದೇವಸ್ಥಾನಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿರುವ ನ್ಯಾಯಾಲಯದ ಆದೇಶ ನಿಜಕ್ಕೂ ದುರದೃಷ್ಟಕರ. ಪಟಾಕಿ ಇಲ್ಲದೇ ರಾಜ್ಯದ ದೇವಸ್ಥಾನಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಉತ್ಸವ ನಡೆಸುವುದು ಕಷ್ಟ. ಪಟಾಕಿ ಸಿಡಿಸಲು ಅನುಮತಿಸುವ ಸಮಯದ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ" ಎಂದು ಹೇಳಿದ್ದರು.
ನ 3ರ ಆದೇಶದಲ್ಲಿ, ಕೇರಳ ಹೈಕೋರ್ಟ್ ದೇವಾಲಯಗಳು ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಅಕಾಲಿಕವಾಗಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿತ್ತು.
ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಮಧ್ಯ ರಾತ್ರಿಯ ಬಳಿಕವೂ ಪಟಾಕಿ ಸಿಡಿಸುತ್ತಿರುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಮತ್ತು ಇದನ್ನು ತಡೆಗಟ್ಟಲು ನಿರ್ದೇಶನ ಕೋರಿ ಅರ್ಜಿಯೊಂದನ್ನು ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿದ್ದ ನ್ಯಾ| ಅಮಿತ್ ರಾವಲ್ ನೇತೃತ್ವದ ಪೀಠ ಪಟಾಕಿ ಸಿಡಿಸುವುದು ನಿಷೇಧಿಸಿ ಮಧ್ಯಂತರ ಆದೇಶ ನೀಡಿತ್ತು.
ಕೇರಳದ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಶೋಧ ನಡೆಸಿ, ಅಕ್ರಮವಾಗಿ ಸಂಗ್ರಹಿ ಸಿರುವ ಪಟಾಕಿಗಳನ್ನು ವಶಪಡಿಸಿಕೊಂಡು ಪಟಾಕಿ ಸಿಡಿಸದಂತೆಯೂ ಸೂಚನೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪೀಠ ನಿರ್ದೇಶನ ನೀಡಿತ್ತು. ಇಷ್ಟು ಮಾತ್ರವಲ್ಲದೇ ನ್ಯಾಯಮೂರ್ತಿ ರಾವಲ್ ಅವರು ತಮ್ಮ ಆದೇಶದಲ್ಲಿ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.