ಗುಜರಾತ್ , 07(DaijiworldNews/RA): ಗುಜರಾತ್ನ ಸೂರತ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗೆ ಕಾರೊಂದು ಡಿಕ್ಕಿ ಹೊಡೆದು ಕಾರಿನ ಬಾನೆಟ್ ಮೇಲೆ ಅಧಿಕಾರಿಯನ್ನು ಸುಮಾರು 300ರಿಂದ 400 ಮೀಟರ್ ದೂರ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ.
ಗುಜರಾತ್ ನ ಸೂರತ್ ನಲ್ಲಿ ಈ ಘಟನೆ ನಡೆದಿದ್ದು ಚಾಲಕನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲ್ಲಿನ ಕಟರ್ಗಾಮ್ ಪ್ರದೇಶದ ಅಲ್ಕಾಪುರಿ ಮೇಲ್ಸೇತುವೆಯ ಕೆಳಗೆ ಈ ಪ್ರಕರಣ ವರದಿಯಾಗಿದ್ದು ಕಾರಿನ ಬಾನೆಟ್ ಮೇಲೆ ಚಾಲಕನು ಪೊಲೀಸ್ ಅಧಿಕಾರಿಯನ್ನು ಸುಮಾರು 300 ರಿಂದ 400 ಮೀಟರ್ ದೂರ ಎಳೆದುಕೊಂಡು ಹೋಗಿದ್ದು ಈ ದೃಶ್ಯಾವಳಿಗಳು ಸ್ಥಳೀಯ ಕಟ್ಟವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಟರ್ಗಾಮ್ ಪೊಲೀಸ್ ಠಾಣೆಯ ತಂಡವು ಅಲ್ಕಾಪುರಿ ಸೇತುವೆಯ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬಿಳಿ ಸ್ಕೋಡಾ ಕಾರು ಸ್ಥಳಕ್ಕೆ ಬಂದಿದೆ. ಈ ವೇಳೆ ಕಾರನ್ನು ತಪಾಸಣೆ ನಡೆಸಲು ಮುಂದಾದಾಗ ಕಾರು ಚಾಲಕ ಗೌತಮ್ ಕಾರು ನಿಲ್ಲಿಸದೆ ಮುಂದೆ ಸಂಚರಿಸಿ ಎನ್ನಲಾಗಿದೆ.
ಈ ವೇಳೆ ಕಾರಿಗೆ ಅಡ್ಡಲಾಗಿ ಬಂದ ಪೊಲೀಸ್ ಅಧಿಕಾರಿಗೆ ಚಾಲಕ ಡಿಕ್ಕಿ ಹೊಡೆಸಿದ್ದು, ಅಧಿಕಾರಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.ಆದರೆ ಚಾಲಕ ಕಾರು ನಿಲ್ಲಿಸದೆ ಮುಂದಕ್ಕೆ ಚಲಿಸಿದ್ದಾನೆ ಎಂದು ಘಟನೆ ಕುರಿತು ಸೂರತ್ ಸಹಾಯಕ ಪೊಲೀಸ್ ಕಮಿಷನರ್ ಝಾಲಾ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಕೊಲೆ ಯತ್ನ ಆರೋಪದ ಮೇಲೆ ಕಟರ್ಗಾಂ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಚಾಲಕನನ್ನು ಬಂಧಿಸಿದ್ದು, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗಾಯಾಳು ಪೊಲೀಸ್ ಅಧಿಕಾರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.