ಬೆಂಗಳೂರು, ನ 07 (DaijiworldNews/AK):ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜಕೀಯ ರಂಗದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೀಗಾಗಿ ಡಿಕೆಶಿ ದೆಹಲಿಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲದ ನಂತರ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಕರೆಸಿ ಮಾತನಾಡಲು ಹೈಕಮಾಂಡ್ ನಿರ್ಧಾರಿಸಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ ಸಿಎಂ ಗದ್ದುಗೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯಿತು. ಕೊನೆಗೆ ಸಿದ್ದರಾಮಯ್ಯ ಅವರು ಸಿಎಂ ಆದ್ರು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 100 ದಿನಗಳನ್ನೂ ಪೂರೈಸಿದೆ. ಆದರೆ ಪಕ್ಷದೊಳಗಿನ ಆಂತರಿಕ ಕಲಹ ಶಮನವಾದಂತೆ ಕಾಣುತ್ತಿಲ್ಲ. ಸಿದ್ದು ಪರ ಶಾಸಕರು ಹಾಗೂ ನಾಯಕರು, ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇತ್ತ ಡಿಕೆಶಿ ಪರ ನಾಯಕರು ಮುಂದಿನ ಎರಡೂವರೆ ವರ್ಷ ಅವಧಿಗೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದೊಳಗೆ ನಾಯಕತ್ವದ ಭಿನ್ನಾಭಿಪ್ರಾಯಗಳು ಬುಗಿಲೆದ್ದಿದೆ.