ಬೆಂಗಳೂರು, ನ 07 (DaijiworldNews/AK): ಕಿಯೋನಿಕ್ಸ್ ಭ್ರಷ್ಟಾಚಾರ, ಕೆಇಎ ಪರೀಕ್ಷಾ ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆಯವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಅಕ್ರಮ ಮತ್ತು ಇದರಲ್ಲಿ ಪ್ರಿಯಾಂಕ್ ಖರ್ಗೆಯವರ ಕಬಂಧ ಬಾಹುಗಳ ಕುರಿತು ಸಿಬಿಐ ತನಿಖೆ ಮಾಡಲು ಗೃಹ ಸಚಿವ ಪರಮೇಶ್ವರ್ ಅವರು ಶಿಫಾರಸು ಮಾಡಬೇಕು ಎಂದರು.
ತಾವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ನೀವ್ಯಾಕೆ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತೀರಿ? ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ಎಲ್ಲ ವಿದ್ಯಮಾನಗಳ ಕೇಂದ್ರಬಿಂದುವಿನಂತಿದ್ದಾರೆ ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಸಂಪೂರ್ಣ ಕರ್ತವ್ಯವಿಮುಖರಾಗಿದ್ದು, ಸಚಿವರಾಗಿ ಮುಂದುವರೆಯಲು ನೈತಿಕತೆ ಹೊಂದಿಲ್ಲ ಎಂದು ತಿಳಿಸಿದರು. ಬೇರೆ ಪಕ್ಷವನ್ನು ಲೀಡರ್ಲೆಸ್, ಕೇಡರ್ಲೆಸ್ ಪಾರ್ಟಿ ಅನ್ನುವ ನೀವು ಬೇಸ್ಲೆಸ್ ಮತ್ತು ಶೇಮ್ಲೆಸ್ ವ್ಯಕ್ತಿ ಎಂದು ಟೀಕಿಸಿದರು.
ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸುವ ದುಸ್ಸಾಹಸದ ಮನಸ್ಥಿತಿ
ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಬಿಜೆಪಿ ಜನಜಾಗೃತಿ ಮೂಡಿಸಲಿದೆ. ನಾಗರಿಕರ ನ್ಯಾಯಾಲಯದಲ್ಲಿ ಇದನ್ನು ಬಿಜೆಪಿ ಪ್ರಶ್ನಿಸಲಿದೆ. ಇಡೀ ಅಕ್ರಮದ ಬಗ್ಗೆ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡುತ್ತಿದೆ ಎಂದರು
ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡಲಾಗುತ್ತದೆ. ಇನ್ನೊಂದೆಡೆ ಪರೀಕ್ಷೆಗೆ ಬಂದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುತ್ತಾರೆ. ಹಿಂದುತ್ವ, ಹಿಂದೂ ಸಂಸ್ಕತಿಗೆ ಈ ಸರಕಾರ ಬೆಲೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.