ಚಿತ್ರದುರ್ಗ, ನ 07 (DaijiworldNews/AK) : ಡಿಸಿಎಂ ಡಿಕೆ ಶಿವಕುಮಾರ್ಗೆ ನಾಳೆಯೇ ಸಿಎಂ ಆಗಬೇಕೆಂಬ ತವಕವಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.
ಕೊಳಾಳ್ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ 2 ದಿನ ಇರುತ್ತೇನೋ, ಬಿಡುತ್ತೇನೋ ಎಂಬ ಭಾವವಿದೆ. ಅಲ್ಲದೇ ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಸ್ಪರ್ಧೆ ನಡೆಯುತ್ತಿದ್ದು, ಅಧಿಕಾರದ ದಾಹ ಹೆಚ್ಚಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಹೊರತು ಸರ್ಕಾರಕ್ಕೆ ಜನರ ಹಿತ ಕಾಪಾಡುವ ಕಾಳಜಿಯೇ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕಾವೇರಿ ನೀರು ಈಗಲೂ ತಮಿಳುನಾಡಿಗೆ ಹರಿಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ.ಎಲ್ಲೆಡೆ ಬರ ತಾಂಡವವಾಡ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ 17 ತಂಡ ರಚಿಸಿಕೊಂಡು ಬರ ಅಧ್ಯಯನ ನಡೆಸುತ್ತಿದೆ. ಇಂದು ಜಿಲ್ಲೆಯಾದ್ಯಂತ ನಮ್ಮ ತಂಡ ಅಧ್ಯಯನ ನಡೆಸಲಿದ್ದು, ಈ ಭಾಗದಲ್ಲಿ ಜೋಳ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾನಿಯಾಗಿವೆ.
ಓರ್ವ ರೈತ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದು, ಆತನಿಗೆ 2 ಸಾವಿರ ರೂ. ಕೂಡ ಕೈಗೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರವೇ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರು ಪೂರೈಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರದಿಂದ ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುವ ಚಟುವಟಿಕೆ ನಡೆದಿಲ್ಲ. ಬಿಜೆಪಿ ಅಧ್ಯಯನದ ಬಳಿಕ ಸರ್ಕಾರ ಎಚ್ಚೆತ್ತು ಜಿಲ್ಲಾ ಸಚಿವರಿಗೆ ಪ್ರವಾಸ ಮಾಡಲು ಸಿಎಂ ಸೂಚಿಸಿದ್ದು, ಪ್ರತಿ ಜಿಲ್ಲೆಗಳಿಗೆ 5, 10, 12 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಈವರೆಗೆ ಜಿಲ್ಲೆಗೆ ತಲುಪಿಲ್ಲ. ಹಣ ನೀಡುವುದಾಗಿ ಘೋಷಿಸಿದ್ದಾರಷ್ಟೇ ಎಂದು ಕಿಡಿಕಾರಿದರು.
ಈ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ಮಾಡಿ ತೋರಿಸಲಾಗುತ್ತಿದೆ.ಮೋದಿ ಸರ್ಕಾರ ರಾಜ್ಯಕ್ಕೆ ಯಾವತ್ತೂ ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯ ಈ ರೀತಿ ಆಡಳಿತ ಮಾಡಿದರೆ ಜನ ಸಹಿಸಲ್ಲ. ಮುಂದಿನ ದಿನಗಳಲ್ಲಿ ಜನ ಸೂಕ್ತ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.