ಬೆಂಗಳೂರು, ನ. 9 ( DaijiworldNews/SK): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆಗಳಿದ್ದು, ಬೆಂಗಳೂರಿನಿಂದ ಸಾಕಷ್ಟು ಜನರು ಊರಿಗೆ ತೆರಳುತ್ತಿರುವ ನಡುವೆ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡೂವರೆ ಪಟ್ಟು ಹೆಚ್ಚಳ ಮಾಡಿದ್ದಾರೆ.
ನಾಳೆಯಿಂದಲೇ ಬಸ್ ಟಿಕೆಟ್ ದರ ಏರಿಕೆಯಾಗಲಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮತ್ತು ಆಫ್ಲೈನ್ನಲ್ಲೂ ಟಿಕೆಟ್ಗಳು ಸಾಮಾನ್ಯ ದರದಲ್ಲಿ ಬಹಳಷ್ಟು ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಈ ಸಮಯದಲ್ಲಿ ಸಾವಿರಾರು ಜನ ತಮ್ಮ ಊರುಗಳಿಗೆ ಪ್ರಯಾಣಿಸುವುದರಿಂದ, ಖಾಸಗಿ ಟ್ರಾವೆಲ್ ಆಪರೇಟರ್ಗಳು ಟಿಕೆಟ್ಗಳ ಬೆಲೆಯನ್ನು ಶೇಕಡಾ 30 ರಷ್ಟು ಹೆಚ್ಚಿಸಿದ್ದಾರೆ. ಜೊತೆಗೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ತುಸು ಇನ್ನಷ್ಟು ಏರಿಕೆಮಾಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ 850- 900 ರೂಪಾಯಿ ಇದ್ದ ದರ ಇದೀಗ 1600- 1900 ರೂಪಾಯಿಗೆ ಫಿಕ್ಸ್ ಆಗಿದೆ. ಬಹುಶಃ ಇನ್ನಷ್ಟು ಬೇಡಿಕೆ ಹೆಚ್ಚಿದರೆ ಮತ್ತಷ್ಟು ದರ ಏರುವ ಸಂಭವ ಇದ್ದು, ಬಸ್ ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಾಸಗಿ ಟ್ರಾವೆಲ್ ಆಪರೇಟರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸೂಚನೆಯಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ನಿಯಮ ಉಲ್ಲಂಘಿಸುವ ಖಾಸಗಿ ಟ್ರಾವೆಲ್ ಆಪರೇಟರ್ಗಳಿಗೆ ದಂಡವನ್ನು ವಿಧಿಸುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.