ಮೈಸೂರು , ನ 10 (DaijiworldNews/SK): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಬೇಕೆಂದ್ರೆ ಅದಕ್ಕೆ ತಯಾರಿ ಕೂಡ ಅಷ್ಟೇ ಕಷ್ಟವಾಗಿರುತ್ತದೆ. ಬಹಳಷ್ಟು ಪ್ರಯತ್ನಗಳ ಬಳಿಕವೂ ಈ ಪರೀಕ್ಷೆ ಉತ್ತೀರ್ಣರಾಗಲು ಅನೇಕರಿಗೆ ಸಾಧ್ಯವಾಗುದಿಲ್ಲ. ಆದರೆ ದೃಢವಾದ ಸಂಕಲ್ಪ ಇದ್ದರೆ, ಏನನ್ನಾದರೂ ಸಾಧಿಸಬಹುದು ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತವರು ದೃಷ್ಟಿಹೀನತೆಯಿಂದ ಬಳಲುತ್ತಿರುವ ಮೈಸೂರು ಮೂಲದ ಕೆ.ಟಿ. ಮೇಘನಾ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಕೆ.ಟಿ. ಮೇಘನಾ. ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ. ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಹೀನರಾಗಿದ್ದಾರೆ. ಮೇಘನಾನವರು 10ನೇ ತರಗತಿಯಲ್ಲಿ ಓದುತ್ತಿರುವಾಗ ರೆಟಿನಾ ಸಮಸ್ಯೆ ಉಂಟಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ಸಮಸ್ಯೆಯನ್ನು ಮೆಟ್ಟಿನಿಂತು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ.
ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, ಅಂಧ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕ್ರೈಬ್ ಫೆಸಿಲಿಟಿ ಮೂಲಕ 2015ನೇ ಬ್ಯಾಚ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಇಷ್ಟಕ್ಕೆ ಸುಮ್ಮನಾಗದೇ 2020ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆ ಎದುರಿಸಿ ಅಲ್ಲೂ ಆಯ್ಕೆಯಾಗಿದ್ದರು. ಆದರೆ ರ್ಯಾಂಕ್ ಕಡಿಮೆ ಬಂದ ಕಾರಣ 2022ನೇ ಸಾಲಿನಲ್ಲಿ ಮತ್ತೆ ಪರೀಕ್ಷೆ ಬರೆದು 425ನೇ ರ್ಯಾಂಕ್ ಪಡೆದು ಸಾಧನೆಗೈದಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೇಘನಾ ಒಂದು ಬಾರಿ ಕೆಎಎಸ್ ಮತ್ತು ಎರಡು ಬಾರಿ ಯುಪಿಎಸ್ ಸಿ ಯಲ್ಲಿ ತೇರ್ಗಡೆಯಾಗುವ ಮೂಲಕ ನನ್ನಿಂದ ಸಾಧ್ಯವಿಲ್ಲ ಎಂದು ಕುಳಿತುಕೊಳ್ಳುವ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ.