ನವದೆಹಲಿ, ನ 11 (DaijiworldNews/MS): ಚಿಕೂನ್ಗುನ್ಯಾ ತಡೆಗೆ, ವಿಶ್ವದ ಮೊದಲ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷದ ಆಡಳಿತ (ಎಫ್ಡಿಎ) ಅನುಮೋದನೆ ನೀಡಿದೆ. " ಇಕ್ಸ್ ಚಿಕ್ " ಎಂಬ ಹೆಸರಿನ ಈ ಲಸಿಕೆಯನ್ನು ಫ್ರೆಂಚ್ ಬಯೋಟೆಕ್ ಕಂಪನಿ ವಲ್ನೆವ ಅಭಿವೃದ್ಧಿಪಡಿಸಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಚಿಕೂನ್ಗುನ್ಯಾ ಅಪಾಯ ಎದುರಿಸುತ್ತಿರುವವರು ಈ ಲಸಿಕೆ ಪಡೆಯಬಹುದಾಗಿದೆ.
ಚಿಕೂನ್ಗುನ್ಯಾ ಪ್ರಕರಣಗಳು ಜಾಗತಿಕ ಕಂಡುಬರುತ್ತಿದ್ದು, ಕಳೆದ 15 ವರ್ಷಗಳಿಂದ 5 ಮಿಲಿಯನ್ ಚಿಕೂನ್ಗುನ್ಯಾ ಪ್ರಕರಣಗಳು ಜಾಗತಿಕವಾಗಿ ವರದಿಯಾಗಿದೆ.
ಇಕ್ಸಚಿಕ್ನ ಸುರಕ್ಷತೆಯನ್ನು ಎರಡು ಕ್ಲಿನಿಕಲ್ ಅಧ್ಯಯನ ಮೂಲಕ ಪೂರ್ಣಗೊಳಿಸಲಾಗಿದೆ. ಚಿಕೂನ್ ಗುನ್ಯಾಗೆ ಕಾರಣವಾಗು ದುರ್ಬಲ ವೈರಸ್ ನ್ನು ಈ ಲಸಿಕೆ ಹೊಂದಿದ್ದು, ಒಂದು ಡೋಸ್ ಮಾತ್ರ ನೀಡಲಾಗುತ್ತದೆ. ಲಸಿಕೆ ಪಡೆದ ಬಳಿಕ ಚಿಕೂನ್ಗುನ್ಯಾ ಕೊಂಚ ಲಕ್ಷಣಗಳು ಗೋಚರಿಸಿದ್ದು ಇದು ಸೌಮ್ಯವಾಗಿರಲಿದೆ ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಎಫ್ಡಿಎ ಹೇಳಿದೆ.
ಚಿಕೂನ್ಗುನ್ಯಾ ವೈರಸ್ನ ಸಾಮಾನ್ಯ ಲಕ್ಷಣ ಜ್ವರ ಮತ್ತು ಕೀಲು ನೋವಾಗಿದೆ. ಇದರ ಹೊರತಾಗಿ ಚರ್ಮದಲ್ಲಿ ದದ್ದುಗಳು, ತಲೆನೋವು ಮತ್ತು ಸ್ನಾಯು ನೋವು ಕಾಣಿಸಲಿದೆ. ಚಿಕೂನ್ಗುನ್ಯಾ ವೈರಸ್ ನವಜಾತ ಶಿಶುಗಳಿಗೆ ಮತ್ತು ಗರ್ಭಿಣಿಯರಿಗೆ ಗಂಭೀರ ಅಪಾಯ ತಂದೊಡ್ಡುತ್ತದೆ.