ಉತ್ತರಾಖಂಡ: ನ 12 (DaijiworldNews/MR): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದ ಹಿನ್ನಲೆ ಸುಮಾರು 40 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಸುರಂಗ ಕುಸಿದ ಸ್ಥಳಕ್ಕೆ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯು ತೆರಳಿದ್ದು, ಕಾರ್ಮಿಕರ ರಕ್ಷಣೆಗೆ ಭರ ಕಾರ್ಯಾಚರಣೆ ಆರಂಭವಾಗಿದೆ.
ಉತ್ತರಕಾಶಿ ಜಿಲ್ಲೆಯ ಸಿಲ್ ಕ್ಯಾರ ಹಾಗೂ ದಂಡಲ್ ಗಾಂವ್ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಹಂತದಲ್ಲಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿದೆ. ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದೆ ಎಂದು ತಿಳಿದುಬಂದಿದೆ.
ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿ.ಮೀ ಸಂಚರಿಸುವುದನ್ನು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಸುರಂಗ ನಿರ್ಮಿಸಲಾಗುತ್ತಿದೆ.
ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಒಂದಷ್ಟು ಕಾರ್ಮಿಕರು ಸುರಂಗದ ಒಳಗೆ ಸಿಲುಕಿದರೆ, ಇನ್ನಷ್ಟು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂಬ ಶಂಕಿಸಲಾಗಿದೆ.
ಕಾರ್ಮಿಕರ ರಕ್ಷಣೆಗೆ ಎಲ್ಲ ಕ್ರಮ ತೆಗೆದುಕೊಳ್ಳಿ ಎಂದು ಅಲ್ಲಿನ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಸೂಚಿಸಿದೆ ಎನ್ನಲಾಗಿದೆ.ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕೆಲವೇ ಗಂಟೆಗಳಲ್ಲಿ ಎಲ್ಲ ಕಾರ್ಮಿಕರನ್ನು ರಕ್ಷಿಸಲಾಗುವುದು ಎಂದು ಉತ್ತರಕಾಶಿ ಎಸ್ ಪಿ ಅರ್ಪಣ್ ಯದುವಂಶಿ ಮಾಹಿತಿ ನೀಡಿದ್ದಾರೆ.