ಬಿಹಾರ, ನ 16 (DaijiworldNews/MR): ಯುಪಿಎಸ್ಸಿ ಪರೀಕ್ಷೆ 2022 ರಲ್ಲಿ 2ನೇ ರ್ಯಾಂಕ್ ಪಡೆದುಕೊಂಡ ಗರಿಮಾ ಲೋಹಿಯಾ ಅವರು ತಮ್ಮ ಸತತ ಪ್ರಯತ್ನದಿಂದ ಯಶಸ್ಸು ಕಂಡವರು. ಇವರ ಸ್ಪೂರ್ತಿಯ ಕಥೆ ಇಲ್ಲಿದೆ.
ಗರಿಮಾ ಲೋಹಿಯಾ ಮೂಲತಃ ಬಿಹಾರದ ಬಕ್ಸರ್ ಎಂಬ ನಗರದಲ್ಲಿ ಜನಿಸಿದರು. ಗರಿಮಾ ವ್ಯಾಪಾರ-ಆಧಾರಿತ ಕುಟುಂಬದಿಂದ ಬಂದವರು.ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ತಮ್ಮ ಅಕೌಂಟಿಂಗ್ ಪದವಿಯನ್ನು 2020 ರಲ್ಲಿ ಪಡೆಕೊಂಡರು.
ಕೋವಿಡ್-19 ಸಾಂಕ್ರಾಮಿಕ ರೋಗವು ತಂದ ಅನೇಕ ಸವಾಲುಗಳ ಹೊರತಾಗಿಯೂ ಗರಿಮಾ ಯೂಟ್ಯೂಬ್ ನಂತಹ ಪ್ಲಾಟ್ ಫಾರ್ಮ್ಗಳಲ್ಲಿ ಶೈಕ್ಷಣಿಕ ವಿಷಯವನ್ನು ಒಳಗೊಂಡಂತೆ ಆನ್ ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಮಾ ಸ್ವಯಂ-ಅಧ್ಯಯನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡವರು.
2021 ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದಿದ್ದಾಗ, ಗರಿಮಾ ಇನ್ನಷ್ಟು ಶ್ರಮಪಟ್ಟರು. ವಿಚಲಿತರಾಗದೆ, ಅವರು ತಮ್ಮ ಅಧ್ಯಯನದ ಸಮಯವನ್ನು ಪ್ರತಿದಿನ 12 ಗಂಟೆಗಳವರೆಗೆ ವಿಸ್ತರಿಸಿದರು.
9 ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡ ಆಕೆಯ ಜೀವನವು ಬಹಳಷ್ಟು ಕಷ್ಟ ಹಾಗೂ ತೊಂದರೆಗಳಿಂದ ಕೂಡಿತ್ತು. ಅನೇಕ ಅಡೆತಡೆಗಳು ಎದುರಾದರೂ ಯಾವುದಕ್ಕೂ ಹಿಂಜರಿಯದೆ, ಗರಿಮಾ ಯಾವುದೇ ತರಬೇತಿ ಕೇಂದ್ರಕ್ಕೆ ಹೋಗದೆ ಆನ್ ಲೈನ್ ತಯಾರಿಯನ್ನು ಆರಿಸಿಕೊಂಡರು. ಅವರು ದಿನಕ್ಕೆ 9 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಶ್ರದ್ಧೆ ಮತ್ತು ಪ್ರಯತ್ನದಿಂದ, ಗರಿಮಾ ಅವರು 2ನೇ ಪ್ರಯತ್ನದಲ್ಲಿ ಪರೀಕ್ಷೆಯನ್ನು 2ನೇ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದರು.
ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಅವರು ಆಯ್ಕೆ ಮಾಡಿದ ವಿಷಯವು ಕಾಮರ್ಸ್ ಮತ್ತು ಅಕೌಂಟಿಂಗ್ ಆಗಿತ್ತು, ಇನ್ನು ಗರಿಮಾ ಅವರು ಈಗಿನ ಯುವಕರಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡುವ ಮೂಲಕ ಇಂತಹ ಪರೀಕ್ಷೆಗಳಿಗೆ ಯಾವ ರೀತಿಯಾದ ತಯಾರಿ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.
ಅವರ ಪ್ರಕಾರ ಸತತ ಪ್ರಯತ್ನ ಹಾಗೂ ಶ್ರದ್ಧೆಯಿಂದ ನಾವು ಜೀವನದಲ್ಲಿ ಎಂತಹ ಕಠಿಣ ಸವಾಲುಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂದು ಹೇಳುವ ಮೂಲಕ ಬಹಳಷ್ಟು ಜನರಿಗೆ ಸ್ಪೂರ್ತಿದಾಯಕರಾಗಿದ್ದಾರೆ.