ವಿಜಯುಪುರ, ನ.16 (DaijiworldNews/PC): ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಹೀನಾಯ ಸೋಲು ಅನುಭವಿಸಿದ ಬಿಜೆಪಿಯ, ಬುಡಕ್ಕೆ ಬೆಂಕಿ ಬಿದ್ದಿದ್ದು. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರನ್ನು ಸೆಳೆಯಲು ಹಾಗೂ ಯಡಿಯೂರಪ್ಪ ಅವರನ್ನು ಬಳಕೆ ಮಾಡಿಕೊಂಡು ಬಿಸಾಡಲು ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು.
ಗುರುವಾರ ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮಾತ್ರ ವಿಜಯೇಂದ್ರ ನೇಮಕ ಎಂಬಂತೆ ಬಿಜೆಪಿ ನಾಯಕರೇ ಹೇಳಿದ್ದಾರೆ. ವಿಜಯೇಂದ್ರ ನೇಮಕ ಬಹಳ ವರ್ಷ ಇರಲ್ಲ. ಮೂರು ವರ್ಷಕ್ಕೆ ಮಾತ್ರ ಸೀಮಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಅಂದರೆ ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಇರಲ್ಲ ಎಂದು ಪರೋಕ್ಷ ಸಂದೇಶ ನೀಡಿದ್ದಾರೆ.
ಯಡಿಯೂರಪ್ಪ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದರೂ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿ ಪಕ್ಷದಿಂದ ವಿಮುಖರಾಗಿದ್ದಾರೆ. ಪರಿಣಾಮ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಲಿಂಗಾಯತರನ್ನು ಸೆಳೆಯುವ ಬಿಜೆಪಿ ಹುನ್ನಾರ ಕೈಗೂಡದು. ಮೋದಿ, ಅಮಿತ್ ಶಾ ಅವರ ಹುನ್ನಾರ ಕೈಗೂಡದು ಎಂದು ಸಚಿವ ಎಂ.ಬಿ.ಪಾಟೀಲ ವ್ಯಂಗ್ಯ ಮಾಡಿದ್ದಾರೆ.