ಅಹಮದಾಬಾದ್, ನ.16 (DaijiworldNews/SK): ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಗುಜರಾತ್ ನಲ್ಲಿ ಏರಿಕೆಯಾಗಿದೆ.
ಈ ಅಂಕಿ-ಅಂಶದ ಪ್ರಕಾರ, ಗುಜರಾತ್ ರಾಜ್ಯವೊಂದರಲ್ಲೇ ಈ ಪ್ರಕರಣಗಳ ಸಂಖ್ಯೆ ಶೇ. 7ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. 2020-21ರಲ್ಲಿ 1095 ಇದ್ದದ್ದು, 2021-22ರಲ್ಲಿ 1,181ಕ್ಕೆ ಹಾಗೂ 2022-23ರಲ್ಲಿ ಮತ್ತೆ ಶೇ. 4.9ರಷ್ಟು ಏರಿಕೆಯಾಗುವ ಮೂಲಕ 1,239ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಅವರ ಪ್ರಶ್ನೆಗೆ ಉತ್ತರಿಸಿರುವ ರಾಜ್ಯ ಗೃಹ ಇಲಾಖೆಯು, ಈ ಪ್ರಕರಣಗಳು ದಾಖಲಾಗಿರುವುದನ್ನು ದೃಢಪಡಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 3,515 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದೆ.
ಇನ್ನು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳುತ್ತಿದ್ದರೂ, ಈ ಕುರಿತು ಸರಕಾರ ಯಾವುದೇ ಕಠಿಣ ಕ್ರಮ ತೆಗೆದುಕೊಂದಿಲ್ಲ.
ಸ್ವತಃ ಗೃಹ ಸಚಿವರೇ ಸೂರತ್ ಜಿಲ್ಲೆಯವರಾಗಿದ್ದರೂ, ಆ ಜಿಲ್ಲೆಯಲ್ಲಿನ ಮಹಿಳಾ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದರ ಕುರಿತು ಅನಂತ್ ಪಟೇಲ್ ಸರಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.