ಬೆಂಗಳೂರು, ನ 17 (DaijiworldNews/AA) : ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಅವರನ್ನು ಅಮಾನತು ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಕ್ಷದಿಂದ ಸಿಎಂ ಇಬ್ರಾಹಿಂ ಅವರನ್ನು ಅಮಾನತುಗೊಳಿಸಿರುವುದಾಗಿ ಹೆಚ್ಡಿ ದೇವೇಗೌಡ ಅವರು ಆದೇಶಿಸಿದ್ದಾರೆ.
ಆದೇಶದ ಅನುಸಾರ ಕರ್ನಾಟಕ ರಾಜ್ಯ ಘಟಕದ ಪ್ರಸ್ತುತ ಕಾರ್ಯಕಾರಿ ಸಮಿತಿಯು ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿರುವುದಿಲ್ಲ. ಮತ್ತು ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿರುವುದಿಲ್ಲ. ಹಾಗೂ ಇನ್ನೂ ಕೆಲ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಪಕ್ಷದ ಹಿತದೃಷ್ಟಿಯಿಂದ ಹಾಗೂ ಪಕ್ಷವನ್ನು ಸಂಘಟಿಸಲು, ಬಲವರ್ಧಿಸಲು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು ಸರ್ವಾನುಮತದಿಂದ ತೀರ್ಮಾನ ಮಾಡಲಾಗಿದೆ. ಈ ಮೈತ್ರಿ ಕುರಿತು ಬಿಜೆಪಿ ಮುಖಂಡರೊಂದಿಗೆ ಚರ್ಚೆ ಮಾಡಲು ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.
ಈ ವಿಚಾರವಾಗಿ ನಡೆದ ಸಭೆಗಳಲ್ಲಿ ಸಿಎಂ ಇಬ್ರಾಹಿಂ ಅವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಏನೂ ಮಾತನಾಡದೆ, ಬಳಿಕ ಈ ತೀರ್ಮಾನದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ವರದಿಯಾಗಿದೆ.
ಇದರಿಂದ ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಜೆಡಿಎಸ್ ಸಂವಿಧಾನದ ಸೆಕ್ಷನ್ 10ರ ಅನ್ವಯ ನ.19ರಿಂದ ಅನ್ವಯವಾಗುವಂತೆ ವಿಸರ್ಜನೆ ಮಾಡಿ ಆದೇಶಿಸಲಾಗಿದೆ ಎಂದು ಹೆಚ್ಡಿ ದೇವೇಗೌಡ ತಿಳಿಸಿದ್ದಾರೆ.