ಮೈಸೂರು,ನ 18 (DaijiworldNews/AK): ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ವಿಡಿಯೋ ವೈರಲ್ ಆಗಿ ರಾಜಕೀಯ ಆರೋಪ –ಪ್ರತ್ಯಾರೋಪ ಮಾಡುವ ಮೂಲಕ ಸಂಚಲವನ್ನೇ ಸೃಷ್ಟಿಸಿತ್ತು.
ಈ ಕುರಿತು ಸಿಎಂ ಪುತ್ರ ಯತೀಂದ್ರ ಅವರು, ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಈಗ ನಾನು ದುಡ್ಡಿನ ಬಗ್ಗೆ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ಆದರೂ ಈಗ ಅದರ ಬಗ್ಗೆ ಹೇಳುತ್ತೇನೆ, ನಾನು ಅವತ್ತು ಮಾತನಾಡಿರುವುದು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ. ಲಿಸ್ಟ್ ಎಂದ ಕೂಡಲೇ ಅದನ್ನು ವರ್ಗಾವಣೆಯೇ ಯಾಕೆ ಆಗಬೇಕು? ಎಂದು ಪ್ರಶ್ನಿಸಿದರು.
ಇವರ ಅವಧಿಯಲ್ಲಿ ಲಿಸ್ಟ್ ಅಂದರೆ ವರ್ಗಾವಣೆ, ಅದು ದಂಧೆಯಾಗಿತ್ತಾ? ಇವರ ಪತ್ನಿ, ಮಗ ಮತ್ತು ಇಡೀ ಕುಟುಂಬ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ? ಹಾಗಾದರೇ ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ನನಗೆ ವರುಣ ಕ್ಷೇತ್ರದ ಜವಾಬ್ದಾರಿಯಿದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರು ಅದರಲ್ಲಿ ತಪ್ಪೇನಿದೆ. ಎಲ್ಲಾ ವರ್ಗಾವಣೆಯನ್ನೂ ಇವರು ಹಣದ ದೃಷ್ಟಿಯಲ್ಲಿ ನೋಡಿದರೇ ಇವರು ಅದೇ ಕೆಲಸ ಮಾಡುತ್ತಿದ್ದರು ಎಂದರ್ಥವಲ್ವಾ ಎಂದರು.
ಆರೋಪಗಳನ್ನು ಮಾಡುವಾಗ ದಾಖಲೆಯಿಟ್ಟು ಮಾಡಲಿ. ದಾಖಲೆಯಿಲ್ಲದೆ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇ ನೆ. ಅನಗತ್ಯವಾಗಿ ಎಲ್ಲಾ ವಿಚಾರವಾಗಿ ನನ್ನ ಹೆಸರನ್ನು ಎಳೆಯಬೇಡಿ ಎಂದರು.
ವಿವೇಕಾನಂದ ಯಾರು ಎಂದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸಫರ್ ಎಲ್ಲಿಗೆ ಆಗಿದೆ, ಆ ಕ್ಷೇತ್ರದ ವ್ಯಾಪ್ತಿ ಯಾವುದು ಎನ್ನುವುದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧ? ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ. ಇವತ್ತಿನ ವರ್ಗಾವಣೆ ಹೆಸರು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.