ಬೆಂಗಳೂರು, ನ 19 (DaijiworldNews/AA): ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕದ್ದು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು,ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ದಳಕ್ಕೆ ಮತ ಹಾಕಿದರೆ ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ಧಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಯಾವುದನ್ನೂ ಸಹ ಕಾಂಗ್ರೆಸ್ ಸರ್ಕಾರ ಮಾಡುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.