ಮಂಡ್ಯ, ನ 20 (DaijiworldNews/AA) : ನಾವು ಹೆಚ್ಚು ಜನರ ಬಳಿ ಹೋಗದ ಕಾರಣ ಮಂಡ್ಯದಲ್ಲಿ ಹಿನ್ನಡೆಯಾಗಿದೆ. ಕೆ.ಆರ್.ಪೇಟೆ ಚುನಾವಣೆ ಗೆದ್ದ ಬಳಿಕ ಜನರ ಬಳಿ ಹೋಗಲಿಲ್ಲ. ಆದ್ದರಿಂದ ನಾವು ಗೆದ್ದ ಕೆ.ಆರ್.ಪೇಟೆ ಕ್ಷೇತ್ರವನ್ನೂ ಸಹ ಕಳೆದುಕೊಂಡಿದ್ದೇವೆ ಎಂದು ಇಂದು ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೈಸೂರು ಹಾಗೂ ಮಂಡ್ಯ ಪ್ರವಾಸದಲ್ಲಿರುವ ಅವರು ಮಂಡ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದರ ಕಾರಣವನ್ನು ವಿಶ್ಲೇಷಿಸಿದರು.
ಚುನಾವಣೆ ವೇಳೆ ನಾವು ಜನರ ಬಳಿ ಹೋಗದ ಕಾರಣ ಜಿಲ್ಲೆಡೆಯಲ್ಲಿ ಹಿನ್ನಡೆಯಾಗಿದೆ. ಈಗಿನಿಂದಲೇ ನಾವು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ವೈಯಕ್ತಿಕವಾಗಿ ಹೆಸರು ತಂದು ಕೊಟ್ಟಿದ್ದು ಹಳೇ ಮೈಸೂರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎಂದರು.
ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ಜೆಡಿಎಸ್ ಜೊತೆಗಿನ ಮೈತ್ರಿಗೆ ಯಾರ ತಕರಾರಿಲ್ಲ. ಜೆಡಿಎಸ್ ಪಕ್ಷವು ಎನ್ಡಿಎ ಮೈತ್ರಿಕೂಟದ ತೆಕ್ಕೆಗೆ ಬರಬೇಕೆನ್ನುವುದು ವರಿಷ್ಠರ ತೀರ್ಮಾನ. ರಾಜ್ಯದಲ್ಲಿ ಈ ತೀರ್ಮಾನದ ಬಗ್ಗೆ ಉತ್ಸಾಹವಿದ್ದು, ಈ ಎರಡು ಪಕ್ಷಗಳ ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುತ್ತವೆ ಎಂದು ಹೇಳಿದರು.