ಮಂಡ್ಯ, ನ 21 (DaijiworldNews/AK) : ಕುಮಾರಸ್ವಾಮಿ ಈಗ ಬಿಜೆಪಿ ಏನು ಹೇಳಿದರೂ ಕೇಳುತ್ತಾರೆ. ಚಡ್ಡಿ ಹಾಕಿಕೊಳ್ಳಲು ರೆಡಿ ಇದ್ದಾರೆ, ದತ್ತ ಮಾಲೆ ಹಾಕಿಕೊಳ್ಳಲು ರೆಡಿ ಇದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬರ ಅಧ್ಯಯನ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತೂ ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಎರಡು ಮೂರು ತಿಂಗಳಿನಿಂದ ನಾಲಿಗೆ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಅವರು ಆ ರೀತಿ ಮಾತನಾಡುವುದು ಸರಿ ಅಂದರೆ ನಾನು ಅವರಪ್ಪನ ರೀತಿ ಮಾತಾಡುತ್ತೇನೆ ಎಂದು ಕಿಡಿಕಾರಿದರು.
ಅವರ ಬಳಿ ಪೆನ್ಡ್ರೈವ್ ಬಿಡುಗಡೆ ಮಾಡಿ ಅಂತಾ ಹೇಳಿದ್ದೆವು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಎನ್ನುತ್ತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರೋದು ಪೆನ್ಡ್ರೈವ್ ಅಲ್ಲ, ಪೆನ್ಸಿಲ್ಡ್ರೈವ್ ಇರೋದು ಅಳಿಸಿ ಹೋಗಿದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ನಾವು ಜಾತ್ಯತೀತ ಅಂದರು. ಮುಸ್ಲಿಂ, ದಲಿತ, ಹಿಂದುಳಿದವರ ಪರ ಎಂದು ಜಾತ್ಯತೀತ ಅಂತಾ ಹೆಸರಿಟ್ಟುಕೊಂಡಿದ್ದರು. ಈಗ ದತ್ತ ಮಾಲೆ ಹಾಕುತ್ತೀನಿ ಎನ್ನುತ್ತಾರೆ. ಯಾವುದನ್ನು ಹಾಕಿಕೊಳ್ಳುತ್ತಾರೋ ಯಾರ ಪರ, ಯಾವ ಸಮಾಜದ ಪರ ನಿಲ್ಲುತ್ತಾರೋ ನಮಗೆ ಗೊತ್ತಿಲ್ಲ ಎಂದು ಹೇಳಿದರು.
ನಮಗೆ ಏನು ಬೇಜಾರಿಲ್ಲ ಅವರು ಚಡ್ಡಿ ಹಾಕಿಕೊಂಡರೂ ಸಂತೋಷ. ದತ್ತ ಮಾಲೆ ಹಾಕಿಕೊಂಡರೂ ಸಂತೋಷ. ಅದು ಅವರ ರಾಜಕಾರಣ, ಅವರು ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.