ನವದೆಹಲಿ, ನ 22 (DaijiworldNews/AA) : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ವರ್ಚುವಲ್ ಜಿ 20 ನಾಯಕರ ಶೃಂಗಸಭೆ ನಡೆಯಲಿದೆ. ಈಗಾಗಲೇ ಸಭೆಯ ಎಲ್ಲಾ ಸಿದ್ಧತೆಗಳು ನಡೆದಿದೆ.
ಸಭೆಗೆ ಆಫ್ರಿಕನ್ ಯೂನಿಯನ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಜಿ 20 ಸದಸ್ಯ ನಾಯಕರು, ಒಂಬತ್ತು ಅತಿಥಿ ರಾಷ್ಟ್ರಗಳು ಮತ್ತು 11 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ. ಸೆ. 10 ರಂದು ಜಿ20 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ನವೆಂಬರ್ 22 ರಂದು ಭಾರತದ ಜಿ20 ಪ್ರೆಸಿಡೆನ್ಸಿಯ ಮುಕ್ತಾಯದ ಮೊದಲು ಭಾರತವು ವರ್ಚುವಲ್ ನಾಯಕರ ಜಿ20 ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆ ವರ್ಚುವಲ್ ಜಿ20 ನಾಯಕರ ಶೃಂಗಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಭಾರತ ಆಯೋಜಿಸಿರುವ ಈ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಭಾಗವಹಿಸಲಿದ್ದಾರೆ. "ಜಾಗತಿಕ ಆರ್ಥಿಕತೆ ಹಾಗೂ ಹಣಕಾಸು ಪರಿಸ್ಥಿತಿ, ಹವಾಮಾನ ಕಾರ್ಯಸೂಚಿ, ಡಿಜಿಟಲೀಕರಣ ಮತ್ತು ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಕ್ರೆಮ್ಲಿನ್" ತಿಳಿಸಿದ್ದಾರೆ.
ಕಳೆದ ಬಾರಿಯಂತೆ, ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ. ಅವರ ಬದಲಿಗೆ, ಪ್ರೀಮಿಯರ್ ಲಿ ಕಿಯಾಂಗ್ ಚೀನಾವನ್ನು ಪ್ರತಿನಿಧಿಸಲಿದ್ದಾರೆ ಎನ್ನಲಾಗುತ್ತಿದೆ.