ಬೆಂಗಳೂರು, ,ನ.22 (DaijiworldNews/AK): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಿಂದ ರದ್ದಾಗಿದ್ದ ಪಿಎಸ್ಐ ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಿರ್ಧರಿಸಿದೆ.
ಡಿ. 23ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ನಡೆಯಲಿದೆ. ಪಿಎಸ್ಐ ಹುದ್ದೆಗಳ ನೇಮಕಾತಿ ಹೈಕೋರ್ಟ್ ನವೆಂಬರ್ 10ರಂದು ನೀಡಿದ್ದ ತೀರ್ಪಿನ ಅನ್ವಯ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಮೊದಲು ಸುಮಾರು 54 ಸಾವಿರ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು.
ರಾಜ್ಯ ಪೊಲೀಸ್ ಇಲಾಖೆಯು ಈ ಹಿಂದೆ 545 ಪಿಎಸ್ಐ ಹುದ್ದೆಗಳಿಗೆ ನಡೆಸಿದ್ದ ನೇಮಕಾತಿ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು ಲಿಖಿತ ಪರೀಕ್ಷೆಗೆ ಅರ್ಹರಾಗಿದ್ದಾರೆ.
ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಸರಕಾರವು 2021 ಅ. 3ರಂದು ನಡೆಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ, ಹೊಸತಾಗಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಿತ್ತು.