ಡೆಹ್ರಾಡೂನ್, ನ 23 (DaijiworldNews/AK): ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಸಿಲುಕಿಹಾಕಿಕೊಂಡಿರುವ 41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ತೆರವುಗೊಳಿಸುವ ಅಂತಿಮ ಹಂತದಲ್ಲಿದೆ. ಕಾರ್ಮಿಕರನ್ನು ಅಗತ್ಯಬಿದ್ದಲ್ಲಿ ಸಾಗಿಸಲು 41 ಆ್ಯಂಬುಲೆನ್ಸ್ ಹಾಗೂ 2 ಹೆಲಿಕಾಪ್ಟರ್ಗಳನ್ನು ಸಿದ್ದಗೊಳಿಸಲಾಗಿದೆ.
ಸುರಂಗದಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ಮತ್ತು ಅವರನ್ನು ಆರೈಕೆ ಮಾಡುವವರಿಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿದೆ" ಎಂದು ಉತ್ತರಕಾಶಿ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಸಿ. ವೈದ್ಯಾಧಿಕಾರಿ ಡಾ.ಆರ್.ಸಿ.ಎಸ್.ಪನ್ವಾರ್ ಹೇಳಿದ್ದಾರೆ.
ಇವರ ವೈದ್ಯಕೀಯ ನೆರವಿಗಾಗಿ ಚಿನ್ಯಾಲಿಸಾರ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ 40 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಬಳಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಗುರುತಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಡೆಹ್ರಾಡೂನ್ನಿಂದ ಹೆಚ್ಚುವರಿ ವೈದ್ಯರು ಕೂಡಾ ಶೀಘ್ರ ಆಗಮಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಕಾರ್ಮಿಕರು 11 ದಿನಗಳಿಂದ ಗಾಳಿ- ಬೆಳಕು ಇಲ್ಲದ ಸ್ಥಳದಲ್ಲಿ ಇರುವ ಕಾರಣದಿಂದ ಉಸಿರಾಟದ ತೊಂದರೆ ಸೇರಿದಂತೆ ಹಲವು ವೈದ್ಯಕೀಯ ಸಮಸ್ಯೆಗಳನ್ನು ಎದುರಿಸಿರುವ ಸಾಧ್ಯತೆ ಇದೆ. ಬಿಸಿಲು ಇಲ್ಲದ ಕಾರಣ ವಿಟಮಿನ್ ಡಿ ಕೊರತೆಯೂ ಬಾಧಿಸುವ ಸಾಧ್ಯತೆ ಇದೆ. ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಡಲು 15 ಮಂದಿ ವೈದ್ಯರನ್ನು ಕರೆಸಲಾಗಿ ಎಂದು ಮೂಲಗಳು ಹೇಳಿವೆ.