ಬಿಹಾರ, ನ 23 (DaijiworldNews/MR): ಐಐಟಿ, ಜೆಇಇ ಪ್ರವೇಶ ಪರೀಕ್ಷೆಯನ್ನು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಐಐಟಿ ಜೆಇಇ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಇಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿ ತನ್ನ 13ನೇ ವಯಸ್ಸಿನಲ್ಲಿಯೇ ಐಐಟಿ ಜೆಇಇ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಐಐಟಿ ಜೆಇಇ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಿದವರಲ್ಲಿ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿ.ಬಿಹಾರದ ಬಾಲ ಪ್ರತಿಭೆ ಸತ್ಯಂ ಕುಮಾರ್ 2013ರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಐಐಟಿ ಜೆಇಇ ಪರೀಕ್ಷೆಯನ್ನು ಪಾಸ್ ಮಾಡುವುದರ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಸತ್ಯಂ ಕುಮಾರ್ ಅವರು 2013ರಲ್ಲಿ 670ನೇ ರ್ಯಾಂಕ್ ಗಳಿಸಿದಾಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ ಅನ್ನು ಪಾಸ್ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆ ಇದೆ.
ಸತ್ಯಂ ಕುಮಾರ್ ಬಿಹಾರದ ಭೋಜ್ಪುರ ಜಿಲ್ಲೆಯವರು ಮತ್ತು ಅವರ ತಂದೆ ಒಬ್ಬ ಸಾಮಾನ್ಯ ರೈತರಾಗಿದ್ದಾರೆ. ಸತ್ಯಂ ತನ್ನ ಗುರಿಯನ್ನು ಸಾಧಿಸಲು ರಾಜಸ್ಥಾನದ ಕೋಟಾದಲ್ಲಿ ಅಧ್ಯಯನ ಮಾಡಿದರು ಮತ್ತು ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಐಐಟಿ ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಸತ್ಯಂ ಮೊದಲ ಬಾರಿಗೆ 2011ರಲ್ಲಿ 12ನೇ ವಯಸ್ಸಿನಲ್ಲಿ ಐಐಟಿ ಜೆಇಇ ಪರೀಕ್ಷೆಯನ್ನು ಬರೆದು, ಭಾರತದಲ್ಲಿಯೇ 8137ರ್ಯಾಂಕ್ ಪಡೆದರು. 2012 ರಲ್ಲಿ ಮತ್ತೆ ಪರೀಕ್ಷೆಯನ್ನು ಬರೆದ ಅವರು 679ನೇ ರ್ಯಾಂಕ್ ನೊಂದಿಗೆ ಜೆಇಇ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಿದರು.
ಐಐಟಿ ಖಾನ್ಪುರದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಸತ್ಯಂ ಕುಮಾರ್ ತಮ್ಮ ಪಿಎಚ್ ಡಿ ಪೂರ್ಣಗೊಳಿಸಲು ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಸೇರಿದರು.
2024ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಪಿಎಚ್ ಡಿ ಸಹ ಪೂರ್ಣಗೊಳಿಸಲಿದ್ದಾರೆ. ಸತ್ಯಂ ಕುಮಾರ್ ಅವರ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಆಪಲ್ ನಲ್ಲಿ ಮೆಷಿನ್ ಲರ್ನಿಂಗ್ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.