ಬೆಂಗಳೂರು, ನ 23 (DaijiworldNews/MS): ಸ್ವಾತಂತ್ರ್ಯಾನಂತರ ಚುನಾವಣೆ ವೇಳೆ ಡಾ. ಅಂಬೇಡ್ಕರ್ ಅವರ ಹೆಸರಿನೊಂದಿಗೆ ಮತ ಕೇಳಿ ಸುಮಾರು 50-55 ವರ್ಷ ನಿರಂತರವಾಗಿ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಯಾವ ನ್ಯಾಯ ಕೊಟ್ಟಿದೆ? ದಲಿತ ಸಮುದಾಯವನ್ನು ಮೇಲೆತ್ತಲು 50- 60 ವರ್ಷಗಳು ಬೇಕೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಇಂದು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಜ್ಯ ಎಸ್ಸಿ ಮೋರ್ಚಾದ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕಾಗಿ ನೋಡಿತ್ತು. ಆ ಸಮುದಾಯಕ್ಕೆ ನ್ಯಾಯ ಕೊಡುವಲ್ಲಿ ಎಡವಿದೆ ಎಂದು ಟೀಕಿಸಿದರು.
ದಲಿತ ಸಮುದಾಯಕ್ಕೆ ನ್ಯಾಯ ಕೊಡುವ ಕಳಕಳಿ, ಬದ್ಧತೆ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಈ ವಿಷಯವನ್ನು ಜನರಿಗೆ ತಲುಪಿಸಬೇಕು ಎಂದು ತಿಳಿಸಿದರು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಅಂತ್ಯೋದಯ ಪರಿಕಲ್ಪನೆಯನ್ನು ಬಿಜೆಪಿ ಹೊಂದಿದೆ ಎಂದು ಅವರು ತಿಳಿಸಿದರು.
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದ್ದರೂ ಅವರಿಗೆ ನ್ಯಾಯ ಕೊಡಲಿಲ್ಲ. ಬದಲಾಗಿ ಅಲ್ಪಸಂಖ್ಯಾತರ ಮತಕ್ಕಾಗಿ ಅಖಂಡ ಅವರಿಗೆ ಟಿಕೆಟ್ ಅನ್ನೂ ನಿರಾಕರಿಸಿದರು. ಕಾಂಗ್ರೆಸ್ ಪಕ್ಷದ ನಡವಳಿಕೆ ಹೀಗಿದ್ದರೂ ಅವರನ್ನು ಯಾಕೆ ಕ್ಷಮಿಸಬೇಕು? ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಮತ್ತೊಂದೆಡೆ ರಾಜ್ಯದಲ್ಲಿ ನಾವು ಇಷ್ಟು ಜನ ಸಚಿವರಿದ್ದೇವೆ. ಸ್ಪೀಕರ್ ಸ್ಥಾನದಲ್ಲಿ ನಮ್ಮ ಕೋಮಿನವರೇ ಕೂತಿದ್ದಾರೆ ಎಂದು ಹೇಳಿದ್ದಾರೆ. ಇದು ಉದ್ಧಟತನದ ಮಾತಲ್ಲವೇ? ಇದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನವಿರೋಧಿ, ದಲಿತ ವಿರೋಧಿಯಲ್ಲವೇ ಎಂದು ಕೇಳಿದರು.
ದಲಿತರು ಹೇಗಿದ್ದರೂ ಬಿಜೆಪಿ ಬೆಂಬಲಿಸುವುದಿಲ್ಲ; ಕಾಂಗ್ರೆಸ್ಸಿಗೇ ಮತ ಕೊಡುತ್ತಾರೆ ಎಂಬುದೇ ಅವರ ದುರಹಂಕಾರಿ ನಡವಳಿಕೆಗೆ ಕಾರಣ ಎಂದು ಆಕ್ಷೇಪಿಸಿದರು. ರೈತಪರ, ಬಡವರ ಪರ, ಎಲ್ಲ ಸಮುದಾಯದ ಪರವಾಗಿ ಹೋರಾಡಿದ ಯಡಿಯೂರಪ್ಪನವರ ಮಗ ಎನ್ನಲು ನನಗೆ ಹೆಮ್ಮೆ ಇದೆ. ಅವರು ಯಾವತ್ತೂ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದ ಅವರು, ನಾಯಕನಾಗಿ ಹೊರಹೊಮ್ಮಲು ಸ್ಥಾನ ಸಿಕ್ಕಿದರೆ ಸಾಲದು; ಅಧಿಕಾರ ಇರುತ್ತದೆ; ಅಧಿಕಾರ ಹೋಗುತ್ತದೆ. ಎಲ್ಲ ಸಮುದಾಯದವರು ಇವತ್ತೂ ಕೂಡ ಯಡಿಯೂರಪ್ಪ ಅವರನ್ನು ಯಾಕೆ ನೆನಪು ಮಾಡುತ್ತಾರೆ ಎಂದು ಕೇಳಿದರು. ಅವರು ಎಲ್ಲ ಸಮುದಾಯದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕೇವಲ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಫೋಟೋ ಬಂದರೆ ನಾವು ಯಶ ಪಡೆಯಲು ಅಸಾಧ್ಯ. ದಲಿತ ಸಮುದಾಯದವರ ಮಧ್ಯೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆದು ಪ್ರಚಲಿತ ರಾಜ್ಯ ರಾಜಕಾರಣದ ಕುರಿತು ಚರ್ಚೆ ಮಾಡಬೇಕು. ರಾಜ್ಯ ಸರಕಾರದ ವೈಫಲ್ಯ, ನರೇಂದ್ರ ಮೋದಿಜೀ ಅವರು ಕಳೆದ 9.5 ವರ್ಷಗಳಲ್ಲಿ ಮಾಡಿದ ಕಾರ್ಯಗಳು, ದೇಶದ ಅಭಿವೃದ್ಧಿ, ವಿಶ್ರಾಂತಿರಹಿತವಾಗಿ ದೇಶದ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನವನ್ನು ತಿಳಿಸಬೇಕು. ಕಿಸಾನ್ ಸಮ್ಮಾನ್ ಯೋಜನೆ, ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ವಿದ್ಯುತ್ ಸಂಪರ್ಕ, ಪ್ರತಿ ಮನೆಗೂ ಶೌಚಾಲಯ ಇರಬೇಕೆಂಬ ಅವರ ಕಾರ್ಯವೈಖರಿಯನ್ನು ತಿಳಿಸುವ ಕಾರ್ಯ ಆಗಬೇಕಿದ ಎಂದು ಸಲಹೆ ನೀಡಿದರು.