ಬೆಂಗಳೂರು, ನ 23 (DaijiworldNews/AA): ಹುತಾತ್ಮ ಯೋಧ ಪ್ರಾಂಜಲ್ ಅವರ ಪಾರ್ಥೀವ ಶರೀರ ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದ್ದು, ಇಂದು ಬೆಂಗಳೂರಿಗೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಶುಕ್ರವಾರ ಮುಂಜಾನೆ ವೇಳೆಗೆ ಪಾರ್ಥೀವ ಶರೀರ ಬರುವ ಸಾಧ್ಯತೆಯಿದ್ದು, ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಮನೆಯ ಬಳಿ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ನವೆಂಬರ್ 22 ರಂದು ನಡೆದ ಭಯೋತ್ಪಾದಕರ ವಿರುದ್ಧ ಎನ್ಕೌಂಟರ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದರು. ಹುತಾತ್ಮರಾದವರ ಪೈಕಿ 63 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಕೂಡ ಒಬ್ಬರಾಗಿದ್ದಾರೆ.
ಇದೀಗ ಯೋಧ ಪ್ರಾಂಜಲ್ ಅವರ ನಿಧನದಿಂದ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮಗನ ಅಗಲಿಕೆಯಿಂದ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರು ದುಃಖತಪ್ತರಾಗಿದ್ದಾರೆ. ಪ್ರಾಂಜಲ್ ಅವರು ಕಳೆದ 6 ತಿಂಗಳ ಹಿಂದೆ ದಸರಾ ಹಬ್ಬಕ್ಕೆಂದು ಮನೆಗೆ ಬಂದಿದ್ದು, ಒಂದು ವಾರ ಜೊತೆಯಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರಾಂಜಲ್ ಅವರು 2 ವರ್ಷಗಳ ಹಿಂದೆ ಕಾಶ್ಮೀರಕ್ಕೆ ತೆರಳುವ ಮುನ್ನ ಬೆಂಗಳೂರಿನ ಅದಿತಿ ಎಂಬವರ ಜೊತೆ ಮದುವೆಯಾಗಿತ್ತು. ಇನ್ನು ಅದಿತಿ ಅವರು ಚೆನ್ನೈ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪತಿ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.