ಶಿವಮೊಗ್ಗ, ನ 24 (DaijiworldNews/HR): ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ಹಿಂಪಡೆಯಲು ಸಚಿವ ಸಂಪುಟ ಅವಸರವಾಗಿ ಸಭೆ ಕರೆದು ತೀರ್ಮಾನ ಮಾಡಿದೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಕಳ್ಳ ಎಂದಿಗೂ ಕಳ್ಳನೇ ಎಂದು ಕೆ. ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಆಸ್ತಿಯ ಸಿಬಿಐ ಕೇಸು ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿಯವರು 136 ಜನರ ಬೆಂಬಲದ ಮೇಲೆ ಮಾಡಬಾರದನೆಲ್ಲಾ ಮಾಡುತ್ತಿದ್ದಾರೆ. 23 ಕೋಟಿ ಇದ್ದದ್ದು, 163 ಕೋಟಿಯಾಗಿದೆ. ಎಲ್ಲಾ ನ್ಯಾಯಾಲಯದಲ್ಲಿ ಅವರು ಹಾಕಿದ್ದ ಅಪೀಲು ಬಿದ್ದಿತ್ತು. 5 ವರ್ಷದಲ್ಲಿ 250 ಕೋಟಿ ಜಾಸ್ತಿಯಾಗಿದ್ದ ಸಿಬಿಐ ವರದಿಯಲ್ಲೇ ಇದೆ ಎಂದರು.
ಇನ್ನು ಚಾಲೀಸ್ ಚೋರ್ ಎಂಬ ಗಾದೆ ಮಾತಿದೆ. ಅದರಂತೆ ಸಿದ್ಧರಾಮಯ್ಯ ಅವರ ಸಂಪುಟ ಕಳ್ಳರ ಗುಂಪಾಗಿದೆ ಎಂದಿದ್ದಾರೆ.
ಅನುಮತಿ ನೀಡುವ ಅಧಿಕಾರ ಇದೆ ಎಂದು ವಾಪಸು ಪಡೆಯುವ ಅಧಿಕಾರ ಅವರಿಗಿಲ್ಲ. ಇದನ್ನು ಸ್ಪೀಕರ್ ಹಾಗೂ ಸುಪ್ರೀಂ ಕೋರ್ಟ್ ವಕೀಲರು ಹೇಳಿದ್ದಾರೆ. ಅವರ ಸಚಿವ ಸಂಪುಟದಲ್ಲಿ ಕಾನೂನು ತಜ್ಞ ಇಲ್ವಾ ಎಂದು ಪ್ರಶ್ನಿಸಿದ್ದಾರೆ.