ಬೆಂಗಳೂರು, ನ 24 (DaijiworldNews/HR): ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳ ಬಂಧನಕೆ ಮೀನಾಮೇಷ ಎಣಿಸಲಾಗುತ್ತಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸದಿದ್ದರೆ ವಿಧಾನಸೌಧದಲ್ಲಿರುವ ಗೃಹ ಸಚಿವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ಪಕ್ಷವು ಎಚ್ಚರಿಕೆ ನೀಡಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆಎ ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಪಕ್ಷದ ರಾಜ್ಯದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ಮುಖಂಡ ಕೆ.ಮಂಜು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಪ್ಪಿತಸ್ಥರ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಿಪ್ಪೇಸ್ವಾಮಿ ಮಾತನಾಡಿ, ‘ನಮ್ಮ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಪಕ್ಷದ ಕಚೇರಿಯ ಆವರಣದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದರು. ಯಾರು ಹೀಗೆ ಮಾಡಿದ್ದಾರೆ ಎಂದು ನಾವು ಕೂಡ ಪರಿಶೀಲನೆ ನಡೆಸಿ ಪೋಲಿಸ್ ಕಮಿಷನರ್ಗೆ ದೂರು ನೀಡಿದ್ದೆವು. ಆದರೆ ಇಲ್ಲಿಯವರೆಗೂ ಪೋಲಿಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಪರಸ್ಪರ ಪ್ರತಿಭಟನೆಗಳು ನಡೆಯುತ್ತವೆ ಎಂದಿದ್ದಾರೆ.