ಬೆಂಗಳೂರು, ನ 24 (DaijiworldNews/PC): ಬೆಂಗಳೂರು ಕಂಬಳಕ್ಕೆ ಸಕಲ ಸಿದ್ದತೆ ಮಾಡಲಾಗುತ್ತಿದ್ದು ಜನರು ಕಂಬಳ ಯಾವಾಗ ಪ್ರಾರಂಭವಾಗುತ್ತದೆ ಎಂಬ ಆತುರದಲ್ಲಿದ್ದಾರೆ, ಕೋಣಗಳು ಹಾಗೂ ಕೋಣಗಳ ಯಜಮಾನರು ಸಿದ್ದರಾಗಿದ್ದಾರೆ.
ಮೈದಾನದ ಮತ್ತೊಂದು ಕಡೆಯಲ್ಲಿ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿಶಾಲ ವೇದಿಕೆ, ಮತ್ತೊಂದೆಡೆ ಆಹಾರ ಮೇಳದ ಟೆಂಟ್ ಮುಂತಾದವುಗಳಿಂದ ಕಂಗೊಳಿಸುತ್ತಿತ್ತು ಬೆಂಗಳೂರು ರಾಜ ಮಹಾರಾಜ ಜೋಡುಕೆರೆ ಕಂಬಳ.
ವಿಶಾಲ ಪ್ರದೇಶವಾದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿ ಮುಂದಾಗಿದ್ದು. ಕರಾವಳಿಯಿಂದ ಹೊರಗೆ ಇದೆ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಹೀಗಾಗಿ ಕೇವಲ ಕಂಬಳ ಮಾತ್ರವಲ್ಲದೆ ಕರಾವಳಿ ಮಣ್ಣಿನ ಸೊಗಡಿನ ಕಂಪನ್ನು ರಾಜಧಾನಿ ಬೆಂಗಳೂರಿಗೆ ಪಸರಿಸಲು ಸಿದ್ಧತೆ ನಡೆಸಲಾಗಿದೆ.
ಮೈದಾನದಲ್ಲಿ ತುಳುನಾಡು ಮತ್ತು ಕರಾವಳಿಯನ್ನು ಪ್ರತಿನಿಧಿಸುವ ಹಲವು ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಯಕ್ಷಗಾನದ ವೇಷಧಾರಿ, ಯಕ್ಷಗಾನದ ಬೃಹತ್ ಕಿರೀಟ, ಬತ್ತದ ಕಣಜ, ಸಿರಿ ತುಪ್ಪೆ, ಕಂಬಳ ಕೋಣಗಳು, ಎತ್ತಿನಗಾಡಿ, ಗೋಮಟೇಶ್ವರ ಪ್ರತಿಮೆ, ಕೋಟಿ ಚೆನ್ನಯರ ಮೂರ್ತಿಗಳನ್ನು ಇಲ್ಲಿ ಇರಿಸಲಾಗಿದೆ. ಇಷ್ಟೇ ಅಲ್ಲದೆ ತುಳುನಾಡ ಮೂಲ ನಂಬಿಕೆಯಾದ ನಾಗಾರಾಧನೆಯ ನಾಗಬನ, ದೈವಾರಾಧನೆಯ ದೈವದ ಮನೆಯ ಮಾದರಿಯನ್ನು ಮಾಡಿ ಬೆಂಗಳೂರಿಗರಿಗೆ ತುಳುನಾಡ ಸಂಸ್ಕೃತಿಯ ಪರಿಚಯ ಮಾಡುವ ಪ್ರಯತ್ನ ನಡೆಯುತ್ತಿದೆ.