ಮೊರ್ಬಿ,ನ 25(DaijiworldNews/PC): ಕಾಲ ಅದೆಷ್ಟೇ ಬದಲಾದರೂ ಎಲ್ಲರೂ ಸಮಾನರೂ ಎಂಬ ಭಾವನೆ ಮೈಗೂಡಿಸ ಬೇಕು ಎಂಬುದು ಕೇವಲ ಭಾಷಣ ಹಾಗೂ ಪತ್ರಿಕೆಗಳಿಗೆ ಸೀಮಿತವಾಗಿದೆ. ಜಾತಿಯಲ್ಲಿ ತಾರತಮ್ಯ ಇಂದಿಗೂ ಹಲವೆಡೆ ನಡೆಯುತ್ತಿದ್ದಿ ಇಲ್ಲೊಂದು ಅತ್ಯಂತ ವಿಕೃತವಾದ ಘಟನೆಯೊಂದು ನಡೆದಿದೆ.
ಗುಜರಾತ್ನ ಮೊರ್ಬಿಯಲ್ಲಿ ಸೆರಾಮಿಕ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನಿಲೇಶ್ ದಾಲ್ಸಾನಿಯಾ ಎಂಬ ದಲಿತ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ಕೆಲಸದಿಂದ ತೆಗೆಯಲಾಗಿತ್ತು. ನಂತರ 18 ದಿನಗಳ ತನ್ನ ಕೆಲಸಕ್ಕೆ ನೀಡಬೇಕಾಗಿದ್ದ ಸಂಬಳ ಕೇಳಲು ಬುಧವಾರ ನಿಲೇಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ರಾಣಿಬಾ ಇಂಡಸ್ಟ್ರೀಸ್ ತೆರಳಿದ್ದರು.
ಈ ವೇಳೆ ಬಾಕಿ ಸಂಬಳ ಕೇಳಲು ಬಂದ ನೌಕರನನ್ನು ಕಂಡು ಕೋಪಗೊಂಡ ಮಹಿಳಾ ಉದ್ಯಮಿಯೋರ್ವಳಾದ ರಾಣಿಬಾ ಮತ್ತು ಆಕೆಯ ಸಹಾಯಕ ಮೊದಲು ಮೂವರಿಗೂ ಕಪಾಳಮೋಕ್ಷ ಮಾಡಿದ್ದಾರೆ. ತನ್ನ ಬೂಟು ನೆಕ್ಕುವಂತೆ ಮಾಡಿ ಹಾಗೂ ಇತರ ನೌಕರರಿಂದ ಬೆಲ್ಟ್ನಿಂದ ಭೀಕರವಾಗಿ ಹೊಡೆದಿದ್ದಾರೆ.
ಇಷ್ಟೇ ಅಲ್ಲದೇ ಇನ್ನೊಮ್ಮೆ ರಾಣಿಬಾಗೆ ಕರೆ ಮಾಡಿ ಸಂಬಳ ಕೇಳುವುದಿಲ್ಲ ಈ ಕಡೆ ಬರುವುದಿಲ್ಲ ಎಂದು ಬಲವಂತದಿಂದ ಹೇಳಿಸಿ ಅದನ್ನು ಚಿತ್ರೀಕರಿಸಿದ್ದಾರೆ. ಇನ್ನೊಮ್ಮೆ ಕಂಪನಿಯ ಕಡೆ ಕಂಡರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾಳೆ. ಇದೀಗ ನಿಲೇಶ್ ಮತ್ತು ಇಬ್ಬರು ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದಾರೆ.