ಅರುಣಾಚಲ, ನ 25 (DaijiworldNews/MR): ಪೂರ್ಣ ಸಮಯದ ಉದ್ಯೋಗದಲ್ಲಿರುವಾಗ ಯುಪಿಎಸ್ಸಿಗೆ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ 57 ರ್ಯಾಂಕ್ ಪಡೆದುಕೊಂಡ ಯಾಶ್ನಿ ನಾಗರಾಜನ್ ಅವರು ಯಸಸ್ಸು ಕಂಡಿದ್ದು, ಅವರ ಸ್ಪೂರ್ತಿಯ ಕಥೆ ಇಲ್ಲಿದೆ.
ಯಾಶ್ನಿ ಯುಪಿಎಸ್ಸಿಗೆ ತಯಾರಿ ನಡೆಸುತ್ತಿರುವಾಗ ಪೂರ್ಣ ಸಮಯದ ಉದ್ಯೋಗಿಯಾಗಿದ್ದರು. 2019ರಲ್ಲಿ ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ 57ನೇ ಸ್ಥಾನ ಪಡೆದ ಅವರು ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸಿಕೊಂಡರು. ತಮ್ಮ 4ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು ಯಶಸ್ಸು ಗಳಿಸಿದರು.
ಯಾಶ್ನಿ ನಾಗರಾಜನ್ ಅವರು ಅರುಣಾಚಲ ಪ್ರದೇಶದ ನಹರ್ಲಗುನ್ ನ ಕೇಂದ್ರೀಯ ವಿದ್ಯಾಲಯದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪಡೆದರು. ಇದಾದ ಬಳಿಕ 2014 ರಲ್ಲಿ ಯೂಪಿಯಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನಿಂದ ಬಿ.ಟೆಕ್ ಮುಗಿಸಿದರು.
ಯಾಶ್ನಿ ಅವರ ತಂದೆ ತಂಗವೇಲ್ ನಾಗರಾಜನ್ ನಿವೃತ್ತ ರಾಜ್ಯ ಪಿಡಬ್ಲ್ಯೂಡಿ ಇಂಜಿನಿಯರ್. ಅವರ ತಾಯಿ ಗೌಹಾಟಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಇಟಾನಗರ ಶಾಖೆಯ ನಿವೃತ್ತ ಅಧೀಕ್ಷಕರಾಗಿದ್ದಾರೆ.
ಪ್ರತಿದಿನ ಯಾಶ್ನಿ ತನ್ನ ಅಧ್ಯಯನಕ್ಕಾಗಿ 4 ರಿಂದ 5 ಗಂಟೆಗಳ ಸಮಯವನ್ನು ಮೀಸಲಿಡುತ್ತಿದ್ದರು. ಇದು ಮಾತ್ರವಲ್ಲ ವಾರಾಂತ್ಯದಲ್ಲಿ ಅವರು ಇಡೀ ದಿನ ಅಧ್ಯಯನ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಅಧ್ಯಯನ ಮಾಡುವುದರಿಂದ ನಿಮ್ಮ ಪರೀಕ್ಷಾ ಸಿದ್ಧತೆ ಮತ್ತಷ್ಟು ಉತ್ತಮಗೊಳ್ಳುತ್ತದೆ ಅಂತಾ ಹೇಳುತ್ತಾರೆ. 4 ರಿಂದ 5 ಗಂಟೆಗಳ ಅಧ್ಯಯನ ನಿಮಗೆ ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದ್ದಾರೆ.
ಯಾಶ್ನಿ ನಾಗರಾಜನ್ ಪ್ರಕಾರ, ಅವರು ಇತರರ ಸಲಹೆ ಮೇರೆಗೆ ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದರು. ಬೇರೆಯವರ ಸಲಹೆ ಮೇರೆಗೆ ತೆಗೆದುಕೊಂಡ ಈ ವಿಷಯ ಅವರ ಆರಂಭಿಕ ಪ್ರಯತ್ನಗಳಲ್ಲಿ ಯಶಸ್ಸು ಸಿಗುವಂತೆ ಮಾಡಲಿಲ್ಲ. ನಂತರ ಅವರು ತಮ್ಮ ವಿಷಯವನ್ನು ಬದಲಾಯಿಸಿದರು ಮತ್ತು ತಮ್ಮ ಇಚ್ಚೆಯ ವಿಷಯವನ್ನು ಆಯ್ಕೆ ಮಾಡಿ ಅದರಲ್ಲಿ ಯಶಸ್ಸನ್ನೂ ಕಂಡರು.
ಯಾಶ್ನಿಯವರ ಪ್ರಕಾರ, ಪ್ರಬಂಧ ಮತ್ತು ನೀತಿಶಾಸ್ತ್ರ ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದಾದ ಪತ್ರಿಕೆಗಳಾಗಿವೆ. ಆದ್ದರಿಂದ ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯ. ಪೂರ್ಣ ಸಮಯದ ಉದ್ಯೋಗದಲ್ಲಿರುವಾಗ ಯುಪಿಎಸ್ ಸಿಗೆ ತಯಾರಿ ಮಾಡುವುದು ಕಷ್ಟ ಎಂದು ಅವರು ಹೇಳುತ್ತಾರೆ.
ಆದರೆ ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನೀವು ಈಗಾಗಲೇ ಕೆಲಸ ಹೊಂದಿರುವಾಗ ಯುಪಿಎಸ್ ಸಿಯಲ್ಲಿ ಅನುತ್ತೀರ್ಣರಾದರೂ ಕೂಡ ನೀವು ಒತ್ತಡ ಅನುಭವಿಸುವುದಿಲ್ಲವೆಂದು ಅವರು ಹೇಳುತ್ತಾರೆ. ನಿಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಕಠಿಣ ಪರಿಶ್ರಮ ಮತ್ತು ಉತ್ತಮ ಸಮಯ ನಿರ್ವಹಣೆಯೊಂದಿಗೆ ನೀವು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬಹುದು ಎಂದು ಸಲಹೆ ನೀಡಿದ್ದಾರೆ.