ಕಲಬುರಗಿ, ನ 26(DaijiworldNews/PC): ರಾಜ್ಯದಲ್ಲಿ ರಾಜ್ಯ ಸರ್ಕಾರ ರದ್ದು ಮಾಡುತ್ತಿರುವ ನೂತನ ಶಿಕ್ಷಣ ನೀತಿಯ ವಿಷಯವಾಗಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯಗೆ ಪಠ್ಯ, ಪಠ್ಯಕ್ರಮ, ಶಿಕ್ಷಣ ನೀತಿ ಯಾವುದೂ ಗೊತ್ತಿಲ್ಲ, ಬರೀ ರಾಜಕೀಯ ಮಾಡೋದೊಂದೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಾಗಿರುವಂತಹ ಯೋಜನೆಗಳನ್ನು ಯಾರೇ ಮಾಡಲಿ ನಾವು ಅದನ್ನು ಮುಂದುವರಿಸಿದ್ದೆವು. ಆದರೆ ಈಗ ಕಾಂಗ್ರೆಸ್ಸಿಗರಿಗೆ ಜನಪರವಾಗಿರುವಂತಹ ಯೋಜನೆಗಳು ಬೇಡವಾಗಿದೆ. ಶಿಕ್ಷಣ ನೀತಿ ವಿಚಾರದಲ್ಲಿ ಹೀಗೆ ಆಟ ಆಡೋದು ಸರಿಯಲ್ಲ ಎಂದರು.
ರಾಜ್ಯಾಧ್ಯಕ್ಷರ ನೇಮಕಾತಿ ವಿಷಯವಾಗಿ ಬಿಜೆಪಿಯಲ್ಲಿನ ಕೆಲವು ಮುಖಂಡರು ನೀಡುತ್ತಿರುವ ಹೇಳಿಕೆ ವಿಚಾರದಲ್ಲಿ ನಾನೇನು ಹೇಳಲಾರೆ. ಅದನ್ನೆಲ್ಲ ಹೈಕಮಾಂಡ್ ಗಮನಿಸುತ್ತದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದೇ ನಮ್ಮೆಲ್ಲರ ಉದ್ದೇಶ ಎಂದು ಹೇಳಿದರು.