ಬೆಂಗಳೂರು,ನ 27(DaijiworldNews/AK): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ವಾಪಸ್ ಪಡೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.
ಇತ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ವಿಚಾರಣೆಗೆ ಬಾಕಿ ಇರುವಾಗ ಮೇಲ್ಮನವಿಯಲ್ಲೇ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದು, ಹೈಕೋರ್ಟ್ ವಿಚಾರಣೆಯನ್ನು ನಿಷ್ಪಲಗೊಳಿಸಲು ಯತ್ನಿಸಲಾಗುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ಸರ್ಕಾರದ ಕ್ರಮ ಕಾನೂನುಬಾಹಿರವಾಗಿದ್ದು, ಸಿಬಿಐ ತನಿಖೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ.
ಈ ಮೂಲಕ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪದ ಯತ್ನ ನಡೆದಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ಸೀಮಿತವಾಗಿ ತಮ್ಮ ವಾದ ಆಲಿಸಲು ಯತ್ನಾಳ್ ಮನವಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ತನಿಖೆಗೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆಯಲು ನಿರ್ಧರಿಸಿದೆ.
ನವೆಂಬರ್ 23ರಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ.