ನವದೆಹಲಿ, ನ 29 (DaijiworldNews/HR): ಮನೆಯ ಆಧಾರಸ್ತಂಭವಾಗಿದ್ದ ಪತಿ ಮರಣ ಹೊಂದಿದರೆ ಅದೇಷ್ಟೋ ಮಹಿಳೆಯರು ತಮ್ಮ ಜೀವನ ಮುಗಿಯಿತೆಂದು ಅಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಮಕ್ಕಳ ಸಲುವಾಗಿ ಸುಂದರವಾದ ಜೀವನವನ್ನು ಮತ್ತೆ ಕಟ್ಟಿಕೊಂಡು ಅನೇಕರಿಗೆ ಸ್ಪೂರ್ತಿದಾಯಕರಾಗಿದ್ದಾರೆ.
ದೀಪ್ತಿ ಗುಪ್ತಾ ಅವರ ಪತಿ ರೋಹಿತ್ ಅವರಿಗೆ ರಸ್ತೆಯಲ್ಲಿ ಹೋಗುವಾಗ ಅಪಘಾತವಾಗಿ ಅವರ ಎಡಗಾಲಿನಲ್ಲಿ 33 ಮುರಿತಗಳಿಗೆ ಕಾರಣವಾಗಿತ್ತು. ಆದರೆ ಅವರು ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೆ. ಅದಾಗಿ ಹತ್ತು ದಿನಗಳ ನಂತರ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು.
ಇನ್ನು ಪತಿಯ ಅಗಲುವಿಕೆಯ ನೋವಿನಿಂದ ಸಂಪೂರ್ಣವಾಗಿ ಹೊರ ಬರಲು 34 ವರ್ಷದ ದೀಪ್ತಿಗೆ ಬಹಳ ಕಷ್ಟವಾಗಿತ್ತು.
ಮೈಕ್ರೋಸಾಫ್ಟ್ ಪ್ರಮಾಣೀಕೃತ ಸಿಸ್ಟಮ್ಸ್ ಎಂಜಿನಿಯರ್ ಆಗಿದ್ದ ದೀಪ್ತಿ ಮದುವೆಯ ಬಳಿಕ ಗೃಹಿಣಿಯಾಗಿದ್ದರು. ಆದರೆ ಅವರ ಪತಿಯ ನಿಧನದ ಬಳಿಕ ಮತ್ತೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಧೈರ್ಯದಿಂದ ಮುನ್ನುಗ್ಗಿ ಒಬ್ಬ ಉದ್ಯಮಿ ಆಗಬೇಕೆಂದು ನಿರ್ಧರಿಸಿ ಕೆಲಸ ಪ್ರಾರಂಭಿಸಿದರು.
ಅಡುಗೆಯ ಉದ್ಯಮವನ್ನು ಸ್ವಂತವಾಗಿ ಶುರು ಮಾಡಲು ಮುಂದಾದ ದೀಪ್ತಿ ದಕ್ಷಿಣ ಭಾರತದ ಆಹಾರವನ್ನು ಮಾಡಿ ಬಡಿಸುವುದಕ್ಕೆ ಆರಂಭಿಸಿದರು. ತಮ್ಮ ಉದ್ಯಮವನ್ನು ಪ್ರಾರಂಭಿಸಲು 10,000 ರೂಪಾಯಿಗಳನ್ನು ಮೊದಲಿಗೆ ಹೂಡಿಕೆ ಮಾಡಿದರು.
ಇನ್ನು ತನ್ನ 8 ವರ್ಷದ ಮಗಳ ಹೆಸರನ್ನು 'ಯಶಿಕಾ ದೋಸೆ ಪಾಯಿಂಟ್' ಎಂದು ಅಂಗಡಿಗೆ ಹೆಸರಿಟ್ಟು ಮೊದಲ ದಿನ ಸುಮಾರು 5 ಕೆಜಿ ಅಕ್ಕಿಯೊಂದಿಗೆ ಪ್ರಾರಂಭಿದೆ. ಮುಂದಕ್ಕೆ ಹೀಗೆ ಚಟ್ನಿ ಮತ್ತು ಸಾಂಬಾರ್ ನಂತಹ ಸೈಡ್ ಡಿಷ್ ಗಳೊಂದಿಗೆ ಚೀಸ್, ಚಾಕೊಲೇಟ್ ಮತ್ತು ಮಸಾಲಾ, ಜೊತೆಗೆ ಇಡ್ಲಿ, ಉತ್ತಪಮ್ ಮತ್ತು ವಡಾ ಸೇರಿದಂತೆ ವಿವಿಧ ರೀತಿಯ ದೋಸೆಗಳನ್ನು ಮಾಡಲು ಪ್ರಾರಂಭಿಸಿದೆ ಎನ್ನುತ್ತಾರೆ ದೀಪ್ತಿ.
ಈಗ ನಾನು ದಿನಕ್ಕೆ ಸುಮಾರು 2000 ರೂಪಾಯಿಗಳನ್ನು ಗಳಿಸಲು ಸಾಧ್ಯವಾಗುತ್ತದೆ. ನಾನು ಈಗ ತಿಂಗಳಿಗೆ ಸುಮಾರು 50000 ರೂಪಾಯಿಗಳನ್ನು ಗಳಿಸುತ್ತಿದ್ದೇನೆ ಎಂದು ಹೇಳುತ್ತಾರೆ.