ಬೆಂಗಳೂರು,ಏ17(Daijiworld News/AZM):2016 ರಿಂದ 2018ರ ಅವಧಿಯಲ್ಲಿ ಸುಮಾರು 50 ಲಕ್ಷ ಉದ್ಯೋಗಗಳು ಕಡಿತಗೊಂಡಿದೆ ಎಂದು ಬೆಂಗಳೂರು ಮೂಲದ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ ವರದಿ ಮಾಡಿದೆ.
ಬೆಂಗಳೂರು ಮೂಲದ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ ವರದಿ ಪ್ರಕಾರ ನವೆಂಬರ್ 2016ರ ನೋಟ್ ಬ್ಯಾನ್ ಯೋಜನೆ ಜಾರಿಗೊಂಡ ಬಳಿಕ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎನ್ನಬಹುದಾದರೂ ನೇರವಾಗಿ ಇದೇ ಕಾರಣ ಎನ್ನಲಾಗುವುದಿಲ್ಲ ಎಂದು ಹೇಳಲಾಗಿದೆ.
ಉದ್ಯೋಗ ಕಡಿತ ವರದಿಯಲ್ಲಿ ಪುರುಷ ಉದ್ಯೋಗಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗಿದೆ. ಮಹಿಳಾ ಉದ್ಯೋಗಿಗಳನ್ನು ಸೇರಿಸಿಕೊಂಡರೆ, ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ ಎಂದು ಅಜೀಂ ಪ್ರೇಂಜಿ ವಿವಿಯ ಸಹಾಯಕ ಪ್ರೊಫೆಸರ್ ಅಮಿತ್ ಬೊಸೊಲೆ ಹೇಳಿದ್ದಾರೆ.
2019ರ ಫೆಬ್ರವರಿಯಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ, 2016ರ ಸೆಪ್ಟೆಂಬರ್ ನಂತರ ನಿರುದ್ಯೋಗ ಪ್ರಮಾಣದಲ್ಲಾಗಿರುವ ಗರಿಷ್ಠ ಏರಿಕೆ ಇದಾಗಿದೆ. ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು 'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)' ಸಂಸ್ಥೆ ವರದಿ ನೀಡಿದೆ.