ನವದೆಹಲಿ, ಡಿ 01 (DaijiworldNews/MR): ನಾವು ಪ್ರತಿದಿನ ಅನೇಕ UPSC ಯಶಸ್ಸಿನ ಕಥೆಗಳನ್ನು ಓದುತ್ತೇವೆ. ಇದೀಗ ಒಡಹುಟ್ಟಿದ ಅಕ್ಕ-ತಂಗಿಯರು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆಗೈದು ಐಎಎಸ್-ಐಪಿಎಸ್ ಆದ ಯಶಸ್ಸಿನ ಕಥೆ ಇಲ್ಲಿದೆ.
ಸಿಮ್ರಾನ್ ಮತ್ತು ಸೃಷ್ಟಿ ಉತ್ತರಪ್ರದೇಶದ ಆಗ್ರಾದ ಇಬ್ಬರು ಸಹೋದರಿಯರು. ಇವರಿಬ್ಬರೂ 2020ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಸಿಮ್ರಾನ್ ತನ್ನ 3ನೇ ಪ್ರಯತ್ನದಲ್ಲಿ 474 ರ್ಯಾಂಕ್ ಪಡೆದುಕೊಂಡರೆ, ಅವರ ತಂಗಿ ಸೃಷ್ಟಿ 373 ರ್ಯಾಂಕ್ ನೊಂದಿಗೆ ತನ್ನ ಮೊದಲ ಪ್ರಯತ್ನದಲ್ಲಿ IAS ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರೂ ಸಹೋದರಿಯರು ಅರ್ಥಶಾಸ್ತ್ರ ಮತ್ತು ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಅವರು ತಮ್ಮ ತಂದೆ ನೀರಜ್ ಕುಮಾರ್ ಅವರ ಕನಸನ್ನು ನನಸು ಮಾಡಲು UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಬದಲು, ಇಬ್ಬರೂ ಸಹೋದರಿಯರು UPSC ಪರೀಕ್ಷೆಗೆ ಒಟ್ಟಿಗೆ ಅಧ್ಯಯನ ಮಾಡಲು ನಿರ್ಧರಿಸಿದರು. ಅವರು ಆಗಾಗ ಹತ್ತಿರದ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಅವರ ತಂದೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ತಾಯಿ ಸುಮನ್ ಗೃಹಿಣಿಯಾಗಿದ್ದರು.
ಇನ್ನು ಇಬ್ಬರು ಸಹೋದರಿಯರು ತಮ್ಮ ಅಂತಿಮ ವರ್ಷದಲ್ಲಿ UPSC ಪರೀಕ್ಷೆಗಳಿಗೆ ತಯಾರಿ ಪ್ರಾರಂಭಿಸಲು ನಿರ್ಧರಿಸಿ ಕೊನೆಗೂ ಇಬ್ಬರು ಅಧಿಕಾರಿಗಳಾಗಿದ್ದಾರೆ.