ಚೆನ್ನೈ,ಏ17(Daijiworld News/AZM):ಹೊಸ ದ್ವಿಚಕ್ರ ವಾಹನವನ್ನು ಇನ್ಮುಂದೆ ಖರೀದಿಸಿದರೆ ಅದರ ಜೊತೆ ಹೆಲ್ಮೆಟ್ ಕೂಡಾ ಖರೀದಿಸಬೇಕಾಗುತ್ತದೆ. ಇಂತಹ ಒಂದು ಹೊಸ ನಿಯಮವನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಲಾಗಿದೆ.
ಗ್ರಾಹಕರು ದುಬಾರಿ ಬೈಕ್ ಅನ್ನು ಖರೀದಿ ಮಾಡುತ್ತಾರೆ. ಆದ್ರೆ ಸ್ವಂತ ಜೀವ ರಕ್ಷಣೆಗಿರುವ ಅಷ್ಟೊಂದು ದುಬಾರಿ ಅಲ್ಲದ ಹೆಲ್ಮೆಟ್ ಅನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಈ ಹಿನ್ನಲೆ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಹೀಗಾಗಿ ಬೈಕ್ ಅಥವಾ ಸ್ಕೂಟರ್ ಖರೀದಿ ವೇಳೆ ಹೆಲ್ಮೆಟ್ ಖರೀದಿಸುವುದನ್ನು ತಮಿಳುನಾಡು ಸರಕಾರ ಕಡ್ಡಾಯಗೊಳಿಸಿದೆ.
ತಮಿಳುನಾಡಿನಲ್ಲಿ ದ್ವಿಚಕ್ರ ವಾಹನ ಖರೀದಿಸುವವರು ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಲೇಬೇಕು. ಬೈಕ್ ಶೋ ರೂಂಗಳಲ್ಲಿ ಹೆಲ್ಮೆಟ್ ಖರೀದಿಗೆ ಸಿಗಲಿದೆ. ಬೈಕ್ ಶೋ ರೂಂ ಮಾಲೀಕರು ಪ್ರತಿ ತಿಂಗಳು, ಬೈಕ್ ಮಾರಾಟ ಹಾಗೂ ಹೆಲ್ಮೆಟ್ ಮಾರಾಟದ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಾಗಿದ್ದು,ಬಿಐಎಸ್ ಸ್ಟಾಂಡರ್ಡ್ ಹೆಲ್ಮೆಟ್ ಮಾತ್ರ ಬಳಕೆ ಮಾಡಬೇಕಾಗಿದೆ.
ಸದ್ಯ ಬೈಕ್ ಖರೀದಿಸುವಾಗ ಹೆಲ್ಮೆಟ್ ಕೂಡ ಖರೀದಿಸಲೇಬೇಕು. ಇನ್ನು ನಿಮ್ಮಲ್ಲಿ ಹಳೇ ಹೆಲ್ಮೆಟ್ ಇದೆ, ಹೆಚ್ಚುವರಿ ಹೆಲ್ಮೆಟ್ ಇದೆ ಅನ್ನೋ ವಾದಗಳು ಒಪ್ಪುವುದಿಲ್ಲ. ಹೊಸ ಬೈಕ್, ಹೊಸ ಹೆಲ್ಮೆಟ್ ಕಡ್ಡಾಯವಾಗಿದ್ದು, ತಮಿಳುನಾಡು ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.