ಬೆಂಗಳೂರು, ಡಿ 01 (DaijiworldNews/AK): ತೆಲಂಗಾಣ ವಿಧಾನಸಭಾ ಚುನಾವಣೆ ನಿನ್ನೆ ಮುಕ್ತಾಯಗೊಂಡಿದೆ.ಇದೀಗ ಮತಗಟ್ಟೆ ಸಮೀಕ್ಷೆಗಳು ಇತರ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನ ಕಾಂಗ್ರೆಸ್ಗೆ ಲಭಿಸಲಿದೆ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ತನ್ನ ಶಾಸಕರನ್ನು ಬೇರೆ ನಗರಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಡಿ. 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಶಾಸಕರ ಖರೀದಿ ಪ್ರಕ್ರಿಯೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಭಾನುವಾರದ ಮತ ಎಣಿಕೆಯ ನಂತರ ಪಕ್ಷದ ಹೈಕಮಾಂಡ್ ಶಾಸಕರನ್ನು ಬೆಂಗಳೂರು ಅಥವಾ ಯಾವುದೇ ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಿದೆ.ಕಾಂಗ್ರೆಸ್ಗೆ 70 ಸ್ಥಾನಗಳಿಗಿಂತ ಕಡಿಮೆಯಾದರೆ, ಶಾಸಕರನ್ನು ಬೆಂಗಳೂರು ಅಥವಾ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಿದೆ, ಬಹುಶಃ ಅವರನ್ನು ಹೋಟೆಲ್ ಅಥವಾ ರೆಸಾರ್ಟ್ಗೆ ಸೀಮಿತಗೊಳಿಸಬಹುದು ಎಂದು ಕಾಂಗ್ರೆಸ್ನ ಮೂಲಗಳಿಂದ ತಿಳಿದು ಬಂದಿದೆ.
ಇತ್ತ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಮೂರನೇ ಎರಡು ಬಹುಮತದೊಂದಿಗೆ ಪಕ್ಷದ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಈ ಬಾರಿ ಪ್ರಚಂಡ ಗೆಲುವು ಸಾಧಿಸಲಿದೆ. ಅದೇ ವಿಷಯ ಮತಗಟ್ಟೆ ಸಮೀಕ್ಷೆಗಳಲ್ಲಿ ಪ್ರತಿಫಲಿಸುತ್ತದೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ಫಿಗರ್ 60 ಆಗಿದೆ.
ಶಾಸಕರನ್ನು ಸ್ಥಳಾಂತರಿಸುವ ತಯಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇರುವ ಪ್ರತಿ ಕ್ಷೇತ್ರಕ್ಕೆ ಇಬ್ಬರು ಸಂಯೋಜಕರನ್ನು ಕಳುಹಿಸಿದೆ ಎನ್ನಲಾಗಿದೆ. ಈ ಸಂಯೋಜಕರು ಚುನಾವಣಾ ಅಧಿಕಾರಿಗಳಿಂದ ತಮ್ಮ ಪ್ರಮಾಣಪತ್ರಗಳನ್ನು ಪಡೆದ ನಂತರ ವಿಜೇತ ಅಭ್ಯರ್ಥಿಗಳನ್ನು ಬಹಿರಂಗಪಡಿಸದ ಸ್ಥಳಗಳಿಗೆ ಸ್ಥಳಾಂತರಿಸಲು ಕಾರ್ಯ ನಿರ್ವಹಿಸುತ್ತಾರೆ. ನಂತರ ಎಲ್ಲಾ ಶಾಸಕರನ್ನು ಕಾರುಗಳ ಬೆಂಗಾವಲು ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕರನ್ನು ಸ್ಥಳಾಂತರಿಸಬೇಕಾದರೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.