ಹಾಸನ, ಏ 17(Daijiworld News/SM): ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಂತಹ ಸಂದರ್ಭದಲ್ಲಿ ದಾಖಲೆಗಳಿಲ್ಲದೆ ಸಾಗಾಟ ನಡೆಸುತ್ತಿದ್ದ ಸುಮಾರು 1.20 ಲಕ್ಷ ರೂಪಾಯಿಗಳನ್ನು ಹಾಸನದಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ರಾಜ್ಯದ ಸಿಎಂ ಅವರ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬೆಂಗಾವಲು ಪಡೆ ವಾಹನದಿಂದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಚನ್ನಾಂಬಿಕಾ ಚಿತ್ರಮಂದಿರದ ಮುಂಭಾಗದಿಂದ ಹಣವನ್ನು ಜಪ್ತಿ ಮಾಡಲಾಗಿದೆ. ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚನ್ನಾಂಬಿಕಾ ಚಿತ್ರಮಂದಿರದ ಪಕ್ಕದಲ್ಲೇ ಸಚಿವ ಎಚ್.ಡಿ.ರೇವಣ್ಣ ನಿವಾಸವಿದ್ದು, ಅವರ ಬೆಂಗಾವಲು ವಾಹನವನ್ನು ತಪಾಸಣೆ ನಡೆಸಿದ ವೇಳೆ ಹಣ ಸಿಕ್ಕಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಚಂದ್ರಯ್ಯ ಮತ್ತು ಪೊಲೀಸ್ ಸಿಬ್ಬಂದಿ ರವಿ ಇದ್ದರು ಎನ್ನಲಾಗಿದೆ.