ದುಬೈ, ಡಿ 01 (DaijiworldNews/AA): 2028ರಲ್ಲಿ ಭಾರತದಲ್ಲಿ COP33 ಶೃಂಗಸಭೆ ಆಯೋಜಿಸುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ.
ದುಬೈನಲ್ಲಿ COP28 ಶೃಂಗಸಭೆಯ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇ.17 ರಷ್ಟಿದ್ದು, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತವು ಶೇ. 4 ಕ್ಕಿಂತ ಕಡಿಮೆ ಕೊಡುಗೆ ನೀಡುತ್ತಿದೆ. ಜೊತೆಗೆ ಭಾರತ ಪರಿಸರ ಹಾಗೂ ಆರ್ಥಿಕತೆಯ ನಡುವೆ ಉತ್ತಮವಾದ ಸಮತೋಲನ ಹೊಂದುವ ಅಭಿವೃದ್ಧಿಯ ಮಾದರಿಯನ್ನು ಪ್ರಪಂಚಕ್ಕೆ ನೀಡಿದೆ ಎಂದರು.
ಭೂಮಿ ತಾಯಿಯು ತನ್ನ ಭವಿಷ್ಯವನ್ನು ರಕ್ಷಿಸಲು ನಮ್ಮೆಡೆಗೆ ನೋಡುತ್ತಿದ್ದು, ನಾವು ಆ ತಾಯಿಯನ್ನು ರಕ್ಷಿಸುವಲ್ಲಿ ಯಶಸ್ಸು ಸಾಧಿಸಬೇಕು. ಹಾಗೂ ನಾವು ನಿರ್ಣಾಯಕರಾಗಿರಬೇಕು. ಜನಸಂಖ್ಯೆಯು ತುಂಬಾ ಕಡಿಮೆ ಇರುವಂತಹ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತದ ಇಂಗಾಲದ ಹೊರಸೂಸುವಿಕೆ ತುಂಬಾ ಕಡಿಮೆಯಾಗಿದೆ. ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.
2030 ರವರೆಗೆ ಇಂಗಾಲದ ಹೊರಸೂಸುವಿಕೆಯ ತೀವ್ರತೆಯನ್ನು 45% ರಷ್ಟು ಕಡಿಮೆ ಮಾಡುವುದು ಭಾರತದ ಗುರಿಯಾಗಿದೆ. ನಾವು ಪಳೆಯುಳಿಕೆಯೇತರ ಇಂಧನದ ಪಾಲನ್ನು ಶೇ. 50 ಕ್ಕೆ ಏರಿಕೆ ಮಾಡಲು ನಿರ್ಧಾರ ಮಾಡಿದ್ದೇವೆ. ಜೊತೆಗೆ ನಾವು 2070 ರ ಹೊತ್ತಿಗೆ ನಿವ್ವಳ ಶೂನ್ಯದ ಗುರಿಯತ್ತ ಮುಂದುವರಿಯುತ್ತೇವೆ ಎಂದು ತಿಳಿಸಿದರು.