ಬೆಂಗಳೂರು, ಡಿ 2 (DaijiworldNews/HR): ಚುನಾವಣೆ ಕಾರಣಕ್ಕಾಗಿ ತೆಲಂಗಾಣಕ್ಕೆ ಹೋಗುತ್ತಿದ್ದು, ಪಕ್ಷ ಏನು ಕೆಲಸ ನೀಡುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತೆಲಂಗಾಣ ಚುನಾವಣೆ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ತಾವು ತೆರಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರದಲ್ಲಿ ಇಂದು ಜನ ಸಂಪರ್ಕ ಸಭೆ ಇಟ್ಟುಕೊಂಡಿದ್ದೇನೆ. ನನ್ನ ಜನರ ಅಹವಾಲು ಸ್ವೀಕರಿಸಲು ಹೋಗುತ್ತಿದ್ದೇನೆ. ನಂತರ 10 ದಿನಗಳ ಕಾಲ ಬೆಳಗಾವಿ ಅಧಿವೇಶನಕ್ಕೆ ಹೋಗಬೇಕಿದೆ. ಈ ಮಧ್ಯೆ ತೆಲಂಗಾಣಕ್ಕೆ ಹೋಗುತ್ತೇನೆ ಎಂದರು.
ಇನ್ನು ನೆರೆ ರಾಜ್ಯದ ನಾಯಕರು ನಮ್ಮ ರಾಜ್ಯದ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಮ್ಮ ನಾಯಕರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ನೆರೆಯ ರಾಜ್ಯದ ಚುನಾವಣೆಯಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ ಎಂದು ಹೇಳಿದ್ದಾರೆ.