ಹೈದರಾಬಾದ್ , ಡಿ 02 (DaijiworldNews/RA): ಕಾವೇರಿ ನದಿಯ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ವಿವಾದ ಇನ್ನೂ ಕೂಡ ಹಾಗೆ ಇದೆ. ಈ ಮಧ್ಯೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಕುಡಿಯುವ ನೀರಿಗಾಗಿ ಕಿತ್ತಾಟ ಶುರುವಾಗಿದೆ.
ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟಿನ ಉಸ್ತುವಾರಿ ವಹಿಸಿಕೊಂಡು ನೀರು ಬಿಡುಗಡೆ ಮಾಡಿದ್ದು, ಇದೇ ಸಂಘರ್ಷಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಕುರಿತು ಸಚಿವ ಅಂಬಟಿ ರಾಮಬಾಬು ಗುರುವಾರ ಬೆಳಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನಸಾಗರ ಬಲ ಕಾಲುವೆಯಿಂದ ನೀರು ಬಿಡುತ್ತಿದ್ದೇವೆ.ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ.ನಾವು ಯಾವುದೇ ಒಪ್ಪಂದವನ್ನು ಉಲ್ಲಂಘಿಸಿಲ್ಲ.ಕೃಷ್ಣಾ ನೀರಿನಲ್ಲಿ 66% ಆಂಧ್ರಪ್ರದೇಶಕ್ಕೆ ಮತ್ತು 34% ಪಾಲು ತೆಲಂಗಾಣಕ್ಕೆ ಸೇರಿದೆ. ನಮಗೆ ಸೇರದ ಒಂದು ಹನಿ ನೀರನ್ನು ಸಹ ನಾವು ಬಳಸಿಲ್ಲ. ನಮ್ಮ ಸೀಮೆಯಲ್ಲಿ ನಮ್ಮ ಕಾಲುವೆಯನ್ನು ತೆರೆಯಲು ನಾವು ಪ್ರಯತ್ನಿಸಿದ್ದೇವೆ.ಈ ನೀರು ನಮ್ಮದು ಎಂದು ಸ್ಪಷ್ಟಣೆ ಕೊಟ್ಟಿದ್ದಾರೆ.
ಈ ಮಧ್ಯೆ ತೆಲಂಗಾಣ ಮುಖ್ಯ ಕಾರ್ಯದರ್ಶಿ ಸಂತಿ ಕುಮಾರಿ ಅವರು ಆಂಧ್ರಪ್ರದೇಶದ ಸುಮಾರು 500 ಶಸ್ತ್ರಸಜ್ಜಿತ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟಿಗೆ ಬಂದು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ. ಗೇಟ್ ಸಂಖ್ಯೆ 5 ಮತ್ತು ಹೆಡ್ ರೆಗ್ಯುಲೇಟರ್ಗಳನ್ನು ತೆರೆದು ಸುಮಾರು 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ಈ ಕ್ರಮ ತೆಲಂಗಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗ, ಹೈದರಾಬಾದ್ ಮತ್ತು ಸುತ್ತಮುತ್ತಲಿನ 2 ಕೋಟಿ ಜನರ ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಪಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಆಂಧ್ರ ಪೊಲೀಸರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. 2015 ರಲ್ಲಿ ಆಂಧ್ರ ಪೊಲೀಸರು ಅಣೆಕಟ್ಟೆಗೆ ನುಗ್ಗಲು ಇದೇ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ತೆಲಂಗಾಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತಡೆದಿದ್ದು, ನೀರಿನ ಗಲಾಟೆ ಅಲ್ಲಿಗೆ ಶಮನವಾಗಿತ್ತು.