ಬೆಂಗಳೂರು, ಎ18(Daijiworld News/SS): ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ದೇಶದ ಪ್ರಜಾಪ್ರಭುತ್ವ ಹಬ್ಬಕ್ಕೆ ಕರ್ನಾಟಕ ಸಿದ್ಧಗೊಂಡಿದೆ. ಎ.18ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಒಟ್ಟು 30 ಸಾವಿರದ 164 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ರಾಜ್ಯದ 14 ಕ್ಷೇತ್ರಗಳಲ್ಲಿ 241 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 37 ಸಾವಿರದ 705 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ. 14 ಕ್ಷೇತ್ರಗಳಲ್ಲಿ ಒಟ್ಟು 2 ಕೋಟಿ 67 ಲಕ್ಷದ 51 ಸಾವಿರದ 893 ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದು, 1 ಲಕ್ಷದ 54 ಸಾವಿರದ 261 ಪೊಲೀಸ್ ಸೇರಿದಂತೆ ಒಟ್ಟಾರೆ 2 ಲಕ್ಷದ 11 ಸಾವಿರದ 405 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ದಿವ್ಯಾಂಗರಿಗಾಗಿ 10 ಸಾವಿರದ 770 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಉಡುಪಿ -ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.