ಹೈದರಾಬಾದ್, ಡಿ 5(DaijiworldNews/PC):ತೆಲಂಗಾಣದಲ್ಲಿ ಕಾಂಗ್ರೆಸ್ ನ ಫೈರ್ಬ್ರಾಂಡ್ ನಾಯಕ ರೇವಂತ್ ರೆಡ್ಡಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿರುವ ರೇವಂತ್ ರೆಡ್ಡಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹೈದರಾಬಾದ್ ನಲ್ಲಿ ಸೋಮವಾರದಂದು ನಡೆದ ಸಿಎಲ್ಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು, ಸಿಎಂ ನೇಮಕದ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಗೆ ಬಿಡಲಾಗಿದೆ. ಎಐಸಿಸಿ ನಾಯಕತ್ವವು ರೇವಂತ್ ರೆಡ್ಡಿ ಹೆಸರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿದ್ದು ಹಲವರು ಇವರನ್ನು ವಿರೋಧಿಸಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗಿತ್ತು.
ತೆಲಂಗಾಣದ ಮುಂದಿನ ಸಿಎಂ ಆಯ್ಕೆ ಕುರಿತಂತೆ ಮಾತನಾಡಿದ್ದ, ಕಾಂಗ್ರೆಸ್ ಸಂಸದ ಉತ್ತಮ್ ಕುಮಾರ್ ರೆಡ್ಡಿ, ಎಐಸಿಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧ ಎಂದು ಹೇಳಿದ್ದರು.
ಮೂಲತಹಃ ಬಿಜೆಪಿಯ ಎಬಿವಿಪಿಯಿಂದ ಬಂದಿರುವ ರೇವಂತ್ ರೆಡ್ಡಿ ಮಲ್ಕಾಜ್ಗಿರಿಯ ಸಂಸದರಾಗಿದ್ದಾರೆ. 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ ಗೆ ಬಂದ ಅವರು ಅಸ್ಥಿತ್ವ ಕಳೆದುಕೊಂಡಿದ್ದ ಕಾಂಗ್ರೆಸ್ ಗೆ ಚೇತರಿಕೆ ಕಾಣುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.