ನವದೆಹಲಿ,ಡಿ 05 (DaijiworldNews/PC): ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ ಗೆದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ ಸಮರ ಆರಂಭಗೊಂಡಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ವಿಭಜನೆಯ ಸಿದ್ಧಾಂತ 70 ವರ್ಷದಿಂದ ಬಂದ ಅಭ್ಯಾಸ. ಅಷ್ಟು ಸುಲಭವಾಗಿ ಅದನ್ನು ಅವರು ಬಿಡುವುದಿಲ್ಲ. ಆದರೆ ಜನರು ಈಗ ಎಚ್ಚೆತ್ತಿದ್ದು, ಬುದ್ದಿವಂತಿಕೆಯಿಂದ ವ್ಯವಹರಿಸುತ್ತಿದ್ದಾರೆ. ಇದರಿಂದ ಮುಂದೆಯೂ ಮತ್ತಷ್ಟು ಘೋರ ಸೋಲುಗಳನ್ನು ಎದುರಿಸಲು ಸಜ್ಜಾಗಿ ಇರಬೇಕು ಎನ್ನುತ್ತಾ ಮೋದಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ತಮ್ಮ ಅಹಂಕಾರ, ಸುಳ್ಳು, ನಿರಾಶಾವಾದ, ಅಜ್ಞಾನದ ಕಾರಣದಿಂದ ಬಹುಶಃ ಕಾಂಗ್ರೆಸ್ಸಿಗರು ಖುಷಿಯಾಗಿಯೇ ಇರುತ್ತಾರೆ. ಆದರೆ ಅವರ ವಿಭಜನೆ ಸಿದ್ದಾಂತದ ವಿಚಾರದಲ್ಲಿ ನಾವು ಸದಾ ಜಾಗೃತರಾಗಿರಬೇಕು ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ನಲ್ಲಿ ಎಚ್ಚರಿಕೆಯನ್ನು ಸೂಚಿಸುವ ಇಮೋಜಿ ಮತ್ತು ನಗುವ ಇಮೋಜಿಗಳನ್ನು ಬಳಸಿದ್ದಾರೆ. ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪಕ್ಷದ ವಿರುದ್ಧ ವ್ಯಂಗ್ಯವಾಗಿ ಬರೆದು ಪೋಸ್ಟ್ ಮಾಡುವುದು ಬಹಳ ಅಪರೂಪ. ವಿಪಕ್ಷದ ವಿರುದ್ಧ ಮಾಡಿದ ಪ್ರಧಾನಿ ಮೋದಿಯ ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.