ಬೆಂಗಳೂರು, ಡಿ 06 (DaijiworldNews/MR): ಹುಬ್ಬಳ್ಳಿಯಲ್ಲಿ ಸೋಮವಾರ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಐಸಿಸ್ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೊಹಮ್ಮದ್ ತನ್ವೀರ್ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಈ ಸಂಬಂಧ ಎನ್ ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಬುಧವಾರ ಬೆಳಗ್ಗೆಯಷ್ಟೇ ಸಿಎಂ ವಿರುದ್ಧ ಐಸಿಸಿ ಉಗ್ರ ಚಟುವಟಿಕೆಯನ್ನು ಬೆಂಬಲಿಸುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಇರಲಿಲ್ಲವೇ ಎಂದು ಆರೋಪವನ್ನು ಮಾಡಿದ್ದರು. ಅಲ್ಲದೆ, ಕೆಲವೇ ಗಂಟೆಗಳಲ್ಲಿ ಸರಣಿ ಫೋಟೊಗಳನ್ನು ಬಿಡುಗಡೆ ಮಾಡಿದ್ದರು.
ಇಂಥ ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದರು. ಈಗ ಎನ್ ಐಎ ತನಿಖೆ ನಡೆಸುವಂತೆ ಅಮಿತ್ ಶಾಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ .
ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ.
ಹೀಗಾಗಿ ಪೀರಾ ಅವರನ್ನು ಕೇಂದ್ರ ಸಂಸ್ಥೆಗಳಿಂದ ಕೂಲಂಕಷವಾಗಿ ತನಿಖೆ ನಡೆಸುವುದು ನಮ್ಮ ದೇಶದ ಹಿತಾಸಕ್ತಿ ದೃಷ್ಟಿಯಿಂದ ಉತ್ತಮ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಯತ್ನಾಳ್ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.